Showing posts with label ಪ್ರಶ್ನೋತ್ತರಗಳು. Show all posts
Showing posts with label ಪ್ರಶ್ನೋತ್ತರಗಳು. Show all posts

Thursday, October 25, 2018

**RSGE**::: ಸರ್ಕಾರಿ ಕಾರ್ನರ್​

ನಾನು 3 ವರ್ಷದಿಂದ ಬಳ್ಳಾರಿ ನ್ಯಾಯಾಂಗ ಇಲಾಖೆಯಲ್ಲಿ ಬೆರಳಚ್ಚು ನಕಲುಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಈಗ ಕೆಪಿಎಸ್​ಸಿ ನಡೆಸಿದ ಪರೀಕ್ಷೆಯಲ್ಲಿ ಬೆರೆಳಚ್ಚುಗಾರ ಹುದ್ದೆಗೆ ಆಯ್ಕೆ ಆಗಿದ್ದು, ಒಂದು ವೇಳೆ ಕಾರಣಾಂತರದಿಂದ ಈ ಹುದ್ದೆ ರದ್ದುಪಡಿಸಿದರೆ ನಾನು ನ್ಯಾಯಾಂಗ ಇಲಾಖೆಗೆ ಮರಳಿ ಕರ್ತವ್ಯಕ್ಕೆ ಹಾಜರಾಗಬಹುದೇ? ಎಷ್ಟು ವರ್ಷಗಳ ಒಳಗೆ ನ್ಯಾಯಾಂಗ ಇಲಾಖೆಗೆ ಮರಳಲು ಅವಕಾಶವಿರುತ್ತದೆ?
| ಎಚ್. ಆನಂದ್ ಗಂಗಾವತಿ, ಕೊಪ್ಪಳ
ಕರ್ನಾಟಕ ಸರ್ಕಾರಿ ಸೇವಾ (ನೇರ ನೇಮಕಾತಿ) ನಿಯಮಾ ವಳಿಯ 1977ರ ನಿಯಮ 11ರ ಮೇರೆಗೆ ನೀವು ಅನುಮತಿ ಪಡೆದು ಅರ್ಜಿ ಸಲ್ಲಿಸಿ ಬೆರಳಚ್ಚುಗಾರ ಹುದ್ದೆಗೆ ಆಯ್ಕೆಯಾದರೆ ಈ ಹುದ್ದೆಯ ಆದೇಶ ಪಡೆದ ಮೇಲೆ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 252ಬಿ ರಂತೆ ಕರ್ತವ್ಯ ದಿಂದ ಬಿಡುಗಡೆ ಹೊಂದಬೇಕಾಗುತ್ತದೆ. ಹೀಗೆ ಬಿಡುಗಡೆ ಹೊಂದುವ ಮೊದಲು ನೀವು ನಿಮ್ಮನೇಮಕಾತಿ ಪ್ರಾಧಿಕಾರಕ್ಕೆ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 2ರ ಮೇರೆಗೆ ನಿಮ್ಮ ಹುದ್ದೆಯ ಹಕ್ಕನ್ನು (ಲೀನ್) 2 ವರ್ಷದ ವರೆಗೆ ಕಾಯ್ದಿರಿಸಬೇಕೆಂದು ವಿನಂತಿಸಬೇಕು. ಆಕಸ್ಮಿಕವಾಗಿ ಕೆಪಿಎಸ್​ಸಿಯ ಬೆರಳಚ್ಚುಗಾರರ ಹುದ್ದೆ ರದ್ದಾದಲ್ಲಿ 2 ವರ್ಷದ ಒಳಗೆ ನೀವು ಪುನಃ ನ್ಯಾಯಾಂಗ ಇಲಾಖೆಗೆ ಮರಳಿ ಕರ್ತವ್ಯಕ್ಕೆ ಹಾಜರಾಗಬಹುದು. ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕ ನೋಡಬಹುದು.

Monday, August 13, 2018

**RSGE**::: ಸರ್ಕಾರಿ ಕಾರ್ನರ್​, ದಿನದ ಪ್ರಶ್ನೆ

ನಾನು ಪ್ರಾಥಮಿಕ ಶಾಲಾ ಶಿಕ್ಷಕನಾಗಿದ್ದು, 20 ವರ್ಷ ಪೂರ್ಣಗೊಂಡಿದೆ. ವೈಯಕ್ತಿಕ ಕಾರಣಕ್ಕಾಗಿ ರಾಜೀನಾಮೆ ನೀಡಲು ಬಯಸಿದ್ದೇನೆ. ಈ ರಾಜೀನಾಮೆ ಸಲ್ಲಿಸುವುದು ಹೇಗೆ? ದಯವಿಟ್ಟು ತಿಳಿಸಿ.
| ತೀರ್ಥಪ್ಪ ತೋಟಗಾರ್ ರಾಯಚೂರು
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 285(2)ರ ಮೇರೆಗೆ ಸದರಿ ಹುದ್ದೆಗೆ ಸ್ವಯಂನಿವೃತ್ತಿ ಮೂಲಕ ರಾಜೀನಾಮೆ ನೀಡಲು ಮೂರು ತಿಂಗಳು ಮುಂಚಿತವಾಗಿ ನಿಮ್ಮ ಪತ್ರವನ್ನು ಸಲ್ಲಿಸಬೇಕಾಗುತ್ತದೆ. ಆಗ ನಿಮಗೆ ಪಿಂಚಣಿ ಸೌಲಭ್ಯಗಳು ಲಭ್ಯವಾಗುತ್ತವೆ. ಆದರೆ ನೀವು ಇಂತಹ ಯಾವುದೇ ಆರ್ಥಿಕ ಮತ್ತು ಸೇವಾ ಸೌಲಭ್ಯಗಳ ಬಗ್ಗೆ ಅಪೇಕ್ಷಿಸದಿದ್ದರೆ ಒಂದು ತಿಂಗಳ ಮುಂಚಿತವಾಗಿ ನಿಮ್ಮ ನೇಮಕಾತಿ ಪ್ರಾಧಿಕಾರಕ್ಕೆ ಖುದ್ದಾಗಿ ರಾಜೀನಾಮೆ ಪತ್ರ ಸಲ್ಲಿಸಿ ಅದರ ಅಂಗೀಕಾರವಾದ ನಂತರ ಕರ್ತವ್ಯದಿಂದ ಬಿಡುಗಡೆ ಹೊಂದಬೇಕಾಗುತ್ತದೆ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕವನ್ನು ನೋಡಬಹುದು.
ಪ್ರಶ್ನೆ ಕೇಳಿ ಪರಿಹಾರ ಪಡೆಯಿರಿ
ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ. ವಿಳಾಸ: ವಿಜಯವಾಣಿ ನಂ. 24, ಶ್ರೀ ಸಾಯಿರಾಂ ಟವರ್ಸ್, ಮೊದಲ ಮಹಡಿ, 5ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು-18, ದೂ: 8884432666, ಫ್ಯಾಕ್ಸ್: 080-26257464

**RSGE**::: ಸರ್ಕಾರಿ ಕಾರ್ನರ್​, ದಿನದ ಪ್ರಶ್ನೆ

ನಾನು 2018ರ ಜೂನ್ 6ರಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ ಕಿರಿಯ ಸಹಾಯಕನಾಗಿ ಕೆಲಸಕ್ಕೆ ಹಾಜರಾದೆ. ಈಗ ಏಳು ತಿಂಗಳು ಗರ್ಭಾವಸ್ಥೆಯಲ್ಲಿರುವ ನನಗೆ ಎಷ್ಟು ದಿನ ಹೆರಿಗೆರಜೆ ಲಭ್ಯವಾಗುತ್ತದೆ? ಈ ರಜೆಯನ್ನು ಸೇವೆಗೆ ಪರಿಗಣಿಸಲಾಗುತ್ತದೆಯೆ? ಈ ಅವಧಿಯಲ್ಲಿ ವೇತನ ನೀಡಲಾಗುತ್ತದೆಯೆ?
| ಹೆಚ್.ಬಿ. ಅಶ್ವಿನಿ ಚಾಮರಾಜನಗರ
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 135ರಂತೆ ಮಹಿಳಾ ಸರ್ಕಾರಿ ನೌಕರರು ಎರಡು ಜೀವಂತ ಮಕ್ಕಳನ್ನು ಪಡೆಯುವವರೆಗೆ ಪ್ರತಿ ಬಾರಿ 180 ದಿನಗಳ ಕಾಲ ಹೆರಿಗೆ ರಜೆಯನ್ನು ಪಡೆದುಕೊಳ್ಳಬಹುದು. ಈ ಅವಧಿಯಲ್ಲಿ ವೇತನ ನೀಡಲಾಗುತ್ತಿದ್ದು, ಸೇವಾವಧಿಯನ್ನು ಪರಿಗಣಿಸಲಾಗುತ್ತದೆ. ನೀವು ಪೂರ್ವಭಾವಿಯಾಗಿ ರಜೆ ಮಂಜೂರಾತಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿ ಈ ಪ್ರಸೂತಿ ರಜೆ ಬಳಸಿಕೊಳ್ಳಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕವನ್ನು ನೋಡಿ.
ಪ್ರಶ್ನೆ ಕೇಳಿ ಪರಿಹಾರ ಪಡೆಯಿರಿ
ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ. ವಿಳಾಸ: ವಿಜಯವಾಣಿ ನಂ. 24, ಶ್ರೀ ಸಾಯಿರಾಂ ಟವರ್ಸ್, ಮೊದಲ ಮಹಡಿ, 5ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು-18, ದೂ: 8884432666, ಫ್ಯಾಕ್ಸ್: 080-26257464,

**RSGE**::: ಸರ್ಕಾರಿ ಕಾರ್ನರ್​ ದಿನದ ಪ್ರಶ್ನೆ

ನಾನು 2013ರಲ್ಲಿ ಸರ್ಕಾರಿ ಸೇವೆಗೆ ಸೇರಿದೆ. ಎರಡು ಮಕ್ಕಳಾದ ಮೇಲೆ 2005ರಲ್ಲಿ ಸಂತಾನಶಕ್ತಿಹರಣ ಚಿಕಿತ್ಸೆಗೆ ಒಳಗಾಗಿದ್ದು ನಾನು ಈ ಕುಟುಂಬಯೋಜನೆಯ ವಿಶೇಷ ಭತ್ಯೆಯ ಸೌಲಭ್ಯ ಪಡೆಯಬಹುದೇ? ದಯವಿಟ್ಟು ತಿಳಿಸಿ.
| ಸುನಂದಾ ಹೊಕ್ರಾಣಿ ಹಾವೇರಿ
1.10.1985ರ ಸರ್ಕಾರಿ ಆದೇಶ ಸಂಖ್ಯೆ ಎಫ್​ಡಿ 27, ಎಸ್​ಆರ್​ಎಸ್ 85ರಂತೆ ಕುಟುಂಬಯೋಜನೆ ಅನುಸರಿಸುವ ಸರ್ಕಾರಿ ನೌಕರರನ್ನು ಉತ್ತೇಜಿಸಲು ಎರಡು ಜೀವಂತ ಮಕ್ಕಳನ್ನು ಹೊಂದಿರುವ ಸರ್ಕಾರಿ ನೌಕರನು ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರೆ ವೈಯಕ್ತಿಕ ವೇತನರೂಪದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಮುಂದಿನ ವೇತನ ಬಡ್ತಿಗೆ ಅನುಗುಣವಾಗಿ ವೈಯಕ್ತಿಕ ವೇತನರೂಪದಲ್ಲಿ ವಿಶೇಷ ವೇತನ ಬಡ್ತಿಯನ್ನು ನೀಡಲು ಸೂಚಿಸಲಾಗಿದೆ. ಆದರೆ ನೀವು ಸರ್ಕಾರಿ ಸೇವೆಗೆ ಸೇರುವ ಮೊದಲೇ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವುದರಿಂದ
ಈ ವಿಶೇಷ ಭತ್ಯೆ ಲಭ್ಯವಾಗುವುದಿಲ್ಲ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕವನ್ನು ನೋಡಬಹುದು.
ಪ್ರಶ್ನೆ ಕೇಳಿ ಪರಿಹಾರ ಪಡೆಯಿರಿ
ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ. ವಿಳಾಸ: ವಿಜಯವಾಣಿ ನಂ. 24, ಶ್ರೀ ಸಾಯಿರಾಂ ಟವರ್ಸ್, ಮೊದಲ ಮಹಡಿ, 5ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು-18, ದೂ: 8884432666, ಫ್ಯಾಕ್ಸ್: 080-26257464

Thursday, August 09, 2018

**RSGE**::: ಸರ್ಕಾರಿ ಕಾರ್ನರ್ ದಿನದ ಪ್ರಶ್ನೆ

ನಾನು ಸರ್ಕಾರಿ ಸೇವೆಯಲ್ಲಿ ಒಟ್ಟು 244 ದಿನ ಗೈರುಹಾಜರಾಗಿ ಇಲಾಖಾ ಮುಖ್ಯಸ್ಥರಿಂದ ವಜಾಗೊಂಡಿದ್ದೇನೆ. 14 ವರ್ಷ 8 ತಿಂಗಳು ಸೇವೆ ಸಲ್ಲಿಸಿದ್ದು, ಸೇವೆಯಲ್ಲಿದ್ದಾಗ ಸ್ವಯಂನಿವೃತ್ತಿ ಹೊಂದಲು ಸಾಧ್ಯವಾಗಲಿಲ್ಲ. ಇಲಾಖಾ ಮುಖ್ಯಸ್ಥರಾಗಲೀ, ಅವರಿಗೂ ಮೇಲ್ಪಟ್ಟ ಅಧಿಕಾರಿಗಳಾಗಲೀ ನನ್ನನ್ನು ಕಡ್ಡಾಯ ನಿವೃತ್ತಿ ಮಾಡಬಹುದೆ?
| ಕೆ.ಸಿ. ಮಂಜುನಾಥ ಶಿವಮೊಗ್ಗ
ಕರ್ನಾಟಕ ಸರ್ಕಾರಿ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 108ರ ಪ್ರಕಾರ ಸರ್ಕಾರಿ ನೌಕರನು ನಾಲ್ಕು ತಿಂಗಳು ಅಥವಾ ಅದಕ್ಕೂ ಹೆಚ್ಚು ಅವಧಿಯವರೆಗೆ ಕರ್ತವ್ಯದಿಂದ ಗೈರುಹಾಜರಾದರೆ ಕರ್ನಾಟಕ ಸರ್ಕಾರಿ ಸೇವಾ (ಸಿಸಿಎ) ನಿಯಮಾವಳಿ 1957ರಲ್ಲಿ ವಿಧಿಸಲಾದ ಕಾರ್ಯವಿಧಾನವನ್ನು ಅನುಸರಿಸಿದ ನಂತರ ವಜಾ ಮಾಡಬಹುದು. ಆದರೆ ನೀವು 15 ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿದ್ದು, ನಿಯಮ 285(2)ರ ಮೇರೆಗೆ ಸ್ವಯಂನಿವೃತ್ತಿ ಹೊಂದಲು ಅರ್ಹರಲ್ಲ. ಅಲ್ಲದೆ ನೀವು ನಿಯಮ 285ರ ಮೇರೆಗೆ ಕಡ್ಡಾಯ ನಿವೃತ್ತಿಗೊಳಿಸಲೂ ಅರ್ಹರಲ್ಲ. ಆದರೆ ವೈದ್ಯಕೀಯ ಆಧಾರದ ಮೇಲೆ ಗೈರುಹಾಜರಾಗಿದ್ದರೆ ಮೇಲ್ಮನವಿ ಪ್ರಾಧಿಕಾರಕ್ಕೆ ಮೂರು ತಿಂಗಳೊಳಗಾಗಿ ಮೇಲ್ಮನವಿ ಸಲ್ಲಿಸಬೇಕು.
ಪ್ರಶ್ನೆ ಕೇಳಿ ಪರಿಹಾರ ಪಡೆಯಿರಿ
ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ. ವಿಳಾಸ: ವಿಜಯವಾಣಿ ನಂ. 24, ಶ್ರೀ ಸಾಯಿರಾಂ ಟವರ್ಸ್, ಮೊದಲ ಮಹಡಿ, 5ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು-18, ದೂ: 8884432666, ಫ್ಯಾಕ್ಸ್: 080-26257464, ಇಮೇಲ್: sarakaricorner@gmail.com

**RSGE**::: ಸರ್ಕಾರಿ ಕಾರ್ನರ್ ದಿನದ ಪ್ರಶ್ನೆ

ನಾನು ಅನುಕಂಪದ ಮೇರೆಗೆ 2016ರಲ್ಲಿ ಕೃಷ್ಣ ಜಲಭಾಗ್ಯ ನಿಗಮಕ್ಕೆ ಪ್ರಥಮ ದರ್ಜೆ ಸಹಾಯಕನಾಗಿ ನೇಮಕಾತಿ ಹೊಂದಿದ್ದೇನೆ. ಪ್ರಥಮದರ್ಜೆ ಸಹಾಯಕ ಹುದ್ದೆಯಿಂದ ಕನ್ನಡ ಉಪನ್ಯಾಸಕ ಹುದ್ದೆಗೆ ಶಿಕ್ಷಣ ಇಲಾಖೆಯಲ್ಲಿ ನೇಮಕಾತಿ ಹೊಂದಲು ಅವಕಾಶವಿದೆಯೇ? ಸೂಕ್ತ ಪರಿಹಾರ ತಿಳಿಸಿ.
| ಶರಣಪ್ಪ ಶಹಾಪುರ, ಯಾದಗಿರಿ
ಪದವಿಪೂರ್ವ ಶಿಕ್ಷಣ ಇಲಾಖೆಯ ಕನ್ನಡ ಉಪನ್ಯಾಸಕ ಹುದ್ದೆಗೆ ನೇರ ನೇಮಕಾತಿ ಹಾಗೂ ಪ್ರೌಢಶಾಲಾ ಸಹಶಿಕ್ಷಕರ ಹುದ್ದೆಯಿಂದ ಪದೋನ್ನತಿಯ ಮೂಲಕ ನೇಮಕಾತಿ ಹೊಂದಲು ಅವಕಾಶವಿದೆ. ಆದರೆ ಪ್ರಥಮದರ್ಜೆ ಸಹಾಯಕ ಹುದ್ದೆಯಿಂದ ಉಪನ್ಯಾಸಕ ಹುದ್ದೆಗೆ ನೇಮಕಾತಿ ಹೊಂದಲು ಅವಕಾಶವಿಲ್ಲ. ಆದುದರಿಂದ ನೀವು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಕನ್ನಡ ಉಪನ್ಯಾಸಕ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಆಯ್ಕೆಯಾಗಿ ನೇಮಕಾತಿ ಹೊಂದಬಹುದು.
ಪ್ರಶ್ನೆ ಕೇಳಿ ಪರಿಹಾರ ಪಡೆಯಿರಿ
ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ. ವಿಳಾಸ: ವಿಜಯವಾಣಿ ನಂ. 24, ಶ್ರೀ ಸಾಯಿರಾಂ ಟವರ್ಸ್, ಮೊದಲ ಮಹಡಿ, 5ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು-18, ದೂ: 8884432666, ಫ್ಯಾಕ್ಸ್: 080-26257464,

**RSGE**::: ಸರ್ಕಾರಿ ಕಾರ್ನರ್ ದಿನದ ಪ್ರಶ್ನೆ

ಸರ್ಕಾರಿ ಪ್ರೌಢಶಾಲಾ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ನನ್ನ ಅತ್ತಿಗೆ 2017ರ ಮೇ 21ಕ್ಕೆ 10 ವರ್ಷ ಪೂರ್ಣಗೊಳಿಸಿದ್ದಾರೆ. ಈ 10 ವರ್ಷದ ಕಾಲಮಿತಿ ಬಡ್ತಿಗೆ ಇಲಾಖಾ ಪರೀಕ್ಷೆ ಕಡ್ಡಾಯವೇ? ಒಂದುವೇಳೆ ಇಲಾಖಾ ಪರೀಕ್ಷೆ ತೇರ್ಗಡೆಗೊಂಡರೆ ಯಾವಾಗ ದೊರಕುತ್ತದೆ?
-ಪವನ್ ದೇಸಾಯಿ ಮಸ್ಕಿ ರಾಯಚೂರು
ಕರ್ನಾಟಕ ಸರ್ಕಾರಿ ಸೇವಾ (ಕನ್ನಡ ಭಾಷೆ ಮತ್ತು ಸೇವಾ ಪರೀಕ್ಷೆಗಳು) ನಿಯಮಾವಳಿಯ 1974ರ ನಿಯಮ 3ರ ಮೇರೆಗೆ ಪ್ರತಿಯೊಬ್ಬ ಸರ್ಕಾರಿ ನೌಕರನು ಮೇಲಿನ ಹುದ್ದೆಗೆ ಪದೋನ್ನತಿ ಪಡೆಯಲು ಇಲಾಖಾ ಪರೀಕ್ಷೆ ತೇರ್ಗಡೆಯಾಗುವುದು ಕಡ್ಡಾಯ. ಅದೇ ರೀತಿ ಕರ್ನಾಟಕ ಸರ್ಕಾರಿ ಸೇವಾ (ಕಾಲಮಿತಿ ಬಡ್ತಿ) ನಿಯಮಗಳು 1983ರ ನಿಯಮ 3ರ ಮೇರೆಗೆ ಈ ಕಾಲಮಿತಿ ಬಡ್ತಿ ಪಡೆಯಲು ಪದೋನ್ನತಿಗೆ ಅರ್ಹತಾದಾಯಕವಾದ ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆಯಾಗುವುದು ಕಡ್ಡಾಯ. ಆದುದರಿಂದ ನಿಮ್ಮ ಅತ್ತಿಗೆಗೆ ಅವರ ಇಲಾಖಾ ಪರೀಕ್ಷೆ ನಡೆದ ದಿನಾಂಕದಿಂದ 10 ವರ್ಷದ ಕಾಲಮಿತಿ ಬಡ್ತಿ ಲಭ್ಯವಾಗುತ್ತದೆ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕವನ್ನು ನೋಡಬಹುದು.

Tuesday, August 07, 2018

**RSGE**::: ಸರ್ಕಾರಿ ಕಾರ್ನರ್ ದಿನದ ಪ್ರಶ್ನೆ

ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದ ನನ್ನ ಮಗಳು 2007ರಲ್ಲಿ ನಿಧನಳಾಗಿದ್ದು, ಅವಳ ಪತಿಗೆ ಕುಟುಂಬಪಿಂಚಣಿ ಲಭ್ಯವಾಗುತ್ತಿತ್ತು. 2010ರಲ್ಲಿ ಅವರೂ ಮರಣ ಹೊಂದಿರುವುದರಿಂದ ಅವರ ಎರಡೂ ಮಕ್ಕಳನ್ನು ನಾನೇ ನೋಡಿಕೊಳ್ಳುತ್ತಿದ್ದೇನೆ. ಅವರಲ್ಲಿ ಗಂಡು ಪ್ರಾಪ್ತವಯಸ್ಕನಾದ ಮೇಲೆ ಹೆಣ್ಣುಮಗುವಿಗೆ ಪಿಂಚಣಿ ನೀಡಲಾಗುತ್ತಿತ್ತು. ಹೆಣ್ಣುಮಗು ಪ್ರಾಪ್ತವಯಸ್ಕಳಾದ ಮೇಲೆ ಈ ಕುಟುಂಬಪಿಂಚಣಿ ರದ್ದುಗೊಂಡಿದೆ. ಇಂತಹ ಪ್ರಕರಣಗಳಿಗೆ ಪಿಂಚಣಿ ವಿಸ್ತರಿಸಿ ಮಂಜೂರಾತಿ ನೀಡಲು ನಿಯಮಗಳಿವೆಯ? ಸಲಹೆ ನೀಡಿ.
-ಸಿ. ಯಮುನಪ್ಪ ಬಳ್ಳಾರಿ
ಕರ್ನಾಟಕ ಸರ್ಕಾರಿ ನೌಕರರ (ಕುಟುಂಬ ನಿವೃತ್ತಿವೇತನ ) ನಿಯಮಾವಳಿ 2002ರ ನಿಯಮ 9ಡಿ(ಜಿ)ರ ಪ್ರಕಾರ ಅಪ್ರಾಪ್ತ ವಯಸ್ಸಿನ ಗಂಡುಮಗು 18 ವರ್ಷ ಹಾಗೂ ಹೆಣ್ಣುಮಗು 21 ವರ್ಷ ಆಗುವವರೆಗೆ ಈ ಕುಟುಂಬಪಿಂಚಣಿಯನ್ನು ಮಂಜೂರು ಮಾಡಲು ನಿಯಮಾವಳಿಯಲ್ಲಿ ಅವಕಾಶವಿದೆ. ಹೀಗಾಗಿ ನೀವು ಹೆಣ್ಣುಮಗುವಿಗೆ ಮತ್ತೆ ಮೂರು ವರ್ಷ ಕುಟುಂಬಪಿಂಚಣಿಯನ್ನು ವಿಸ್ತರಿಸಲು ಕೋರಿ ಅರ್ಜಿ ಸಲ್ಲಿಸಿ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕ ನೋಡಿ.

Wednesday, July 04, 2018

**RSGE**::: ಅಂಧರಾಗಿದ್ದರೆ ಆಸ್ತಿಯಲ್ಲಿ ಭಾಗ ಇಲ್ಲವೇ??

ಎಸ್. ಸುಶೀಲಾ ಚಿಂತಾಮಣಿ
# ತಂದೆ ತಾಯಿಗೆ ನಾವು ಮೂವರು ಮಕ್ಕಳು. ನಮ್ಮ ತಂದೆಗೆ ತಾತನಿಂದ ಬಂದಿದ್ದ ಆಸ್ತಿಯನ್ನು ಮೂರೂ ಮಕ್ಕಳಿಗೆ ವಿಭಾಗ ಮಾಡಿಕೊಟ್ಟಿದ್ದಾರೆ. ಆದರೆ, ನಮ್ಮ ತಂದೆ ತಾಯಿಗೆ ಅವರ ಸೊಸೆಯರ ಮತ್ತು ಮೊಮ್ಮಕ್ಕಳ ವರ್ತನೆಯಿಂದ ಬೇಸರವಾಗಿದೆ. ನಮ್ಮ ತಂದೆ ತಾಯಿಯ ಕಾಲಾನಂತರ ಈ ಆಸ್ತಿಗಳಲ್ಲಿ ಸೊಸೆಯರಿಗೆ ಮತ್ತು ಮಕ್ಕಳಿಗೆ ಭಾಗ ಹೋದರೆ ಹೇಗೆ ಎನ್ನುವ ಯೋಚನೆಯಿದೆ. ಸೊಸೆಯರಿಗೆ ಮತ್ತು ಮಕ್ಕಳಿಗೆ ಈ ಆಸ್ತಿಗಳಲ್ಲಿ ಭಾಗ ಹೋಗಲೇಬಾರದು ಎಂದು ಬರೆಸಬಹುದೇ? ಇದರಿಂದ ಏನಾದರೂ ತೊಂದರೆ ಆಗುತ್ತದೆಯೇ?
ಹೆಸರು ಊರು ಬೇಡ
ನೀವು ವೃಥಾ ಯೋಚನೆ ಮಾಡುತ್ತಿದ್ದೀರಿ. ನಿಮ್ಮ ತಂದೆಗೆ ಅವರ ತಂದೆಯಿಂದ ಬಂದ ಆಸ್ತಿ ಪ್ರತ್ಯೇಕ ಆಸ್ತಿ ಆಗುತ್ತದೆ. ಅದನ್ನು ಅವರು ತಮ್ಮ ಇಚ್ಛೆ ಬಂದಂತೆ ವಿಲೇವಾರಿ ಮಾಡಬಹುದು. ಅವರು ಈಗಾಗಲೇ ಈ ಆಸ್ತಿಯನ್ನು ಮೂರು ಮಕ್ಕಳಿಗೂ ಹಂಚಿ ವಿಭಾಗ ಮಾಡಿದ್ದಾರೆ. ಈಗ ಅದು ನಿಮ್ಮಗಳ ಪ್ರತ್ಯೇಕ ಆಸ್ತಿ ಆಗುತ್ತದೆ. ನೀವು ಆ ಆಸ್ತಿಗಳನ್ನು ನಿಮ್ಮ ತಂದೆಯ ಜೀವಿತ ಕಾಲದಲ್ಲಿಯೇ ಏನು ಬೇಕಾದರೂ ಮಾಡಬಹುದು. ನೀವು ನಿಮ್ಮ ಜೀವಿತ ಕಾಲದಲ್ಲಿ ಈ ಆಸ್ತಿಗಳನ್ನು ಪರಭಾರೆ ಮಾಡದೆ ತೀರಿಕೊಂಡರೆ ಮಾತ್ರ ಆ ಆಸ್ತಿ ನಿಮ್ಮ ಹೆಂಡತಿ ಮತ್ತು ಮಕ್ಕಳಿಗೆ ಸಮವಾಗಿ ಭಾಗ ಆಗುತ್ತದೆ. ನಿಮ್ಮ ತಂದೆ ಬದುಕಿರುವವರೆಗೆ ಅವರಿಂದ ನಿಮಗೆ ಬಂದ ಆಸ್ತಿಯಲ್ಲಿ ನಿಮ್ಮ ನಿಮ್ಮ ಹೆಂಡತಿಯರಿಗೆ ಮತ್ತು ನಿಮ್ಮ ಮಕ್ಕಳಿಗೆ ಹಕ್ಕು ಇರುವುದಿಲ್ಲ. ಆದರೆ ನಿಮ್ಮ ತಂದೆ ತೀರಿಕೊಂಡ ಬಳಿಕ ಮಕ್ಕಳಿಗೆ ನಾಲ್ಕನೇ ತಲೆಯಿಂದ ಬಂದ (ತಂದೆಯ ಅಜ್ಜನಿಂದ ಬಂದ) ಆಸ್ತಿಯಾಗುವುದರಿಂದ ಅದರಲ್ಲಿ ಹಕ್ಕು ಬರುತ್ತದೆ. ನಿಮ್ಮ ತಂದೆ ತಾಯಿಯ ಕಾಲಾನಂತರ, ಸೊಸೆಯರಿಗೆ ಮತ್ತು ಮಕ್ಕಳಿಗೆ ಈ ಆಸ್ತಿಗಳಲ್ಲಿ ಭಾಗ ಹೋಗಲೇಬಾರದು ಎಂದು ಅವರಿಂದ ಬರೆಸಲು ಆಗುವುದಿಲ್ಲ. ನೀವು ನಿಮ್ಮ ತಂದೆಯ ಆಸೆ ತೀರಿಸಬೇಕೆಂದರೆ ಈಗಲೇ ಆಸ್ತಿ ಮಾರಿ ಹಣವನ್ನು ಬ್ಯಾಂಕಿನಲ್ಲಿ ಹಾಕಿ ಇಟ್ಟುಕೊಳ್ಳಬಹುದು ಅಷ್ಟೆ.
# ನಮ್ಮ ತಂದೆಗೆ ನಾವು ಮೂವರು ಮಕ್ಕಳು. ನನಗೆ ಒಬ್ಬ ಅಕ್ಕ, ಒಬ್ಬ ತಮ್ಮ. ನನಗೆ ಕಣ್ಣು ಕಾಣಿಸುವುದಿಲ್ಲ. ಕೆಲಸದಲ್ಲಿ ಇದ್ದೇನೆ. ನಮ್ಮ ತಂದೆ ತಾಯಿ ಇಬ್ಬರೂ ಇಲ್ಲ. ನಮ್ಮ ತಂದೆ ಎರಡು ಮಹಡಿ ಇರುವ ಒಂದು ದೊಡ್ಡ ಮನೆ ಕಟ್ಟಿದ್ದರು. ಒಂದು ಸೈಟೂ ಇದೆ. ಆ ಮನೆ ಕಟ್ಟಲು ನಾನು ಮತ್ತು ಅಕ್ಕ ಹಣ ಕೊಟ್ಟಿದ್ದೆವು. ಆಮೇಲೆ ಮನೆ ಗಟ್ಟಿ ಮಾಡಲು ತಮ್ಮನಿಗೂ ಹಣ ಕೊಟ್ಟೆವು. ಈಗ ತಮ್ಮ ನನ್ನನ್ನು ಕಡೆಗಣಿಸುತ್ತಿದ್ದಾನೆ. ಅವನ ಹೆಂಡತಿಯ ಜತೆ ಸೇರಿ ಮನೆ ಬಿಟ್ಟು ಹೋಗು ಎನ್ನುತ್ತಿದ್ದಾನೆ. ನಾನು ಅಂಧಳಾಗಿರುವುದರಿಂದ ನನಗೆ ಕೋರ್ಟಿಗೆ ಹೋದರೂ ಭಾಗ ಬರುವುದಿಲ್ಲ ಎನ್ನುತ್ತಿದ್ದಾನೆ. ನಾನು ಮನೆಗೆ ಕೊಟ್ಟಿರುವ ದುಡ್ಡೂ ಕೊಡುವುದಿಲ್ಲ ಎನ್ನುತ್ತಿದ್ದಾನೆ. ನಾನೀಗ ಏನು ಮಾಡಬೇಕು? ದಯಮಾಡಿ ತಿಳಿಸಿ, ಸಹಾಯ ಮಾಡಿ.
-ರೂಪಾ ಊರು ಬೇಡ
ನೀವು ಹೆದರಬೇಕಾಗಿಲ್ಲ. ನಿಮ್ಮ ತಂದೆಯ ಆಸ್ತಿಯಲ್ಲಿ ನಿಮಗೆ, ನಿಮ್ಮ ಅಕ್ಕನಿಗೆ ಮತ್ತು ನಿಮ್ಮ ತಮ್ಮನಿಗೆ ಮೂವರಿಗೂ ಮೂರನೇ ಒಂದು ಭಾಗ ಸಮಪಾಲು ಇರುತ್ತದೆ. ನಿಮಗೆ ನಿಮ್ಮ ಭಾಗ ಬೇಕೆಂದು ಕೂಡಲೇ ನ್ಯಾಯಾಲಯದಲ್ಲಿ ವಿಭಾಗದ ಕೇಸು ಹಾಕಿ. ಮನೆಯಿಂದ ನಿಮ್ಮನ್ನು ತಮ್ಮ ಹೊರಹಾಕದಂತೆ ತಡೆ ಆಜ್ಞೆಯನ್ನೂ ನೀವು ಪಡೆಯಬಹುದು. ದೈಹಿಕ ನ್ಯೂನ್ಯತೆಯಿಂದ ಆಸ್ತಿಯಲ್ಲಿ ಭಾಗದ ಹಕ್ಕು ಹೋಗುವುದಿಲ್ಲ. ಕುರುಡರಿಗೂ ಆಸ್ತಿಯಲ್ಲಿ ಹಕ್ಕು ಇದ್ದೇ ಇರುತ್ತದೆ. ಇನ್ನು ಮನೆ ಕಟ್ಟಲು ತಂದೆಗೆ ಮತ್ತು ತಮ್ಮನಿಗೆ ನೀವು ಕೊಟ್ಟ ಹಣ ನಿಮಗೆ ಬರುವುದಿಲ್ಲ. ಅದನ್ನು ನೀವು ಅವರಿಗೆ ಸಾಲರೂಪವಾಗಿ ಕೊಟ್ಟಿದ್ದರೆ, ಸಾಲ ಕೊಟ್ಟ ಮೂರು ವರ್ಷಗಳ ಒಳಗೆ ಅದನ್ನು ವಾಪಸ್ ಪಡೆಯಲು ಕೇಸು ಹಾಕಬಹುದಿತ್ತು. ಹಾಗೆಯೇ ವಿಶ್ವಾಸದಿಂದ ಕೊಟ್ಟಿದ್ದರೆ ಏನೂ ಮಾಡಲಾಗುವುದಿಲ್ಲ.
(ಪ್ರತಿಕ್ರಿಯಿಸಿ: susheelasarathi@yahoo.co.in)
(ಲೇಖಕರು ಹೈಕೋರ್ಟ್ ವಕೀಲರು, ಹಿರಿಯ ಮಧ್ಯಸ್ಥಿಕೆಗಾರರು)
(ಸೂಚನೆ: ದಯವಿಟ್ಟು ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕಳಿಸಬೇಡಿ.)
ಪ್ರತಿ ಮಂಗಳವಾರ ಪ್ರಕಟವಾಗುವ ಈ ಅಂಕಣದಲ್ಲಿ, ಮಹಿಳೆಯರು ಕುಟುಂಬ, ದಾಂಪತ್ಯ ಇತ್ಯಾದಿಗಳಿಗೆ ಸಂಬಂಧಿಸಿದ ಕಾನೂನಾತ್ಮಕ ವಿಷಯಗಳ ಕುರಿತಾದ ಪ್ರಶ್ನೆಗಳನ್ನು ಕೇಳಬಹುದು.
ನಮ್ಮ ವಿಳಾಸ:
ಸಂಪಾದಕರು, ವಿಜಯವಾಣಿ, ನ್ಯಾಯದೇವತೆ ವಿಭಾಗ,
ನಂ. 24, ಸಾಯಿರಾಂ ಟವರ್ಸ್, ಮೊದಲನೇ ಮಹಡಿ, 5ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು – 560 018.

ಹೆಚ್ಚು ಓದಿದವು