Thursday, August 16, 2018

**RSGE**::: ಮುಂಬಡ್ತಿ ಹಿಂಬಡ್ತಿಗೆ ಹಿನ್ನಡೆ, | ಲ.ರಾಘವೇಂದ್ರ, ಸೇವಾ ಕಾನೂನು ತಜ್ಞರು

ರಾಷ್ಟ್ರದಲ್ಲಿ ಪ್ರಥಮ ಬಾರಿಗೆ ರಾಜ್ಯ ಸಿವಿಲ್ ಸೇವೆಯಲ್ಲಿ ಪರಿಶಿಷ್ಟ ವರ್ಗ ಮತ್ತು
ಜಾತಿಯವರಿಗೆ ಸಾಕಷ್ಟು ಪ್ರಾತಿನಿದ್ಯವಿಲ್ಲವೆಂದು ರಾಜ್ಯ ಸರ್ಕಾರವು 1978ರಿಂದ
ಪದೋನ್ನತಿಯಲ್ಲಿ ಮೀಸಲಾತಿ ಕಲ್ಪಿಸಿಕೊಟ್ಟಿತು. ಇದರಲ್ಲಿ ಶೇ.15ರಷ್ಟು ಪರಿಶಿಷ್ಟ
ಜಾತಿಯವರಿಗೆ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ.3ರಷ್ಟು ಮೀಸಲಾತಿಯನ್ನು ಸಿವಿಲ್ ಸೇವೆಯ
‘ಎ’ ಗುಂಪಿನ ಹುದ್ದೆಯ ಕಿರಿಯ ಶ್ರೇಣಿಯವರಿಗೂ ಪದೋನ್ನತಿ ಕಲ್ಪಿಸಲಾಯಿತು. ಇದರ ಪರಿಣಾಮ
ಸಾವಿರಾರು ಮಂದಿ ಪರಿಶಿಷ್ಟ ಗುಂಪಿನವರು ಮೀಸಲಾತಿ ಪಡೆದು ಇನ್ನುಳಿದ ಸಾಮಾನ್ಯ ವರ್ಗದ
ನೌಕರರಿಗೆ ಸ್ವಾಭಾವಿಕ ನ್ಯಾಯ ದೊರಕಿಸಿಕೊಡುವಲ್ಲಿ ಸರ್ಕಾರ ವಿಫಲವಾಯಿತು. ಈ ವೈಫಲ್ಯದ
ಹಿನ್ನೆಲೆಯಲ್ಲಿ ಹಲವಾರು ಸರ್ಕಾರಿ ನೌಕರರು ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಹಾಗೂ ಸರ್ವೇಚ್ಛ
ನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ಸಂವಿಧಾನದ ಅನುಚ್ಛೇದ 14 ಮತ್ತು 16ರಂತೆ
ಪ್ರಶ್ನಿಸಲ್ಪಟ್ಟಿತು. ಈ ಹಿನ್ನೆಲೆಯಲ್ಲಿ 2011ರಲ್ಲಿ ಶ್ರೀ ಬಿ.ಕೆ. ಪವಿತ್ರ ಅವರು
(ಸಿವಿಲ್ ಅಪೀಲು ಸಂಖ್ಯೆ 2368/2011) ಸರ್ವೇಚ್ಛ ನ್ಯಾಯಾಲಯದಲ್ಲಿ ಪರಿಶಿಷ್ಟ ಗುಂಪಿನ
ಪದೋನ್ನತಿ ಬಗ್ಗೆ ತತ್ಪರಿಣಾಮದ ಜ್ಯೇಷ್ಠತೆ ಪ್ರಶ್ನಿಸಿ ಪ್ರಕರಣ ದಾಖಲಿಸಿದರು. ಇದರ
ವಿಚಾರಣೆ ನಡೆದು ಮಾನ್ಯ ಸರ್ವೇಚ್ಛ ನ್ಯಾಯಾಲಯವು ದಿನಾಂಕ 9.2.2017ರಂದು ರಾಜ್ಯ ಸಿವಿಲ್
ಸೇವೆಗಳಲ್ಲಿನ ಎಲ್ಲ ವೃಂದಗಳ ಜ್ಯೇಷ್ಠತಾ ಪಟ್ಟಿಗಳನ್ನು ಪರಿಷ್ಕರಿಸಿ ಪದೋನ್ನತಿ ನೀಡಲು
ಸೂಚಿಸಿತು. ಇದರನ್ವಯ ರಾಜ್ಯ ಸರ್ಕಾರವು ಅನೇಕ ಸರ್ಕಾರಿ ಆದೇಶ/ಸುತ್ತೋಲೆಗಳನ್ನು ಹೊರಡಿಸಿ
ಜ್ಯೇಷ್ಠತಾ ಪಟ್ಟಿಯನ್ನು ಪರಿಷ್ಕರಿಸಲು ಸೂಚಿಸಿತ್ತು. ಇದರಿಂದಾಗಿ ಸಾಮಾನ್ಯ ವರ್ಗದ
ಸುಮಾರು ನಾಲ್ಕು ಸಾವಿರ ನೌಕರರು ಮುಂಬಡ್ತಿ ಪಡೆದರು. ಅಷ್ಟೇ ಪ್ರಮಾಣದಲ್ಲಿ ಪರಿಶಿಷ್ಟ
ಗುಂಪಿನವರು ಹಿಂಬಡ್ತಿ ಪಡೆದರು. ಇದರ ಪರಿಣಾಮ ರಾಜ್ಯ ಸರ್ಕಾರವು ವರ್ಲ್ಡ್ ಬ್ಯಾಂಕಿನ
ಹಿತದೃಷ್ಟಿಯಿಂದ 2017ರಲ್ಲಿ ಅಧಿನಿಯಮ ರಚಿಸಿತು. ಈ ಅಧಿನಿಯಮವು 2002ರಲ್ಲಿ ರಾಜ್ಯ
ಸರ್ಕಾರವು ಕರ್ನಾಟಕ ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿದ ಸರ್ಕಾರಿ ನೌಕರರ
ಜ್ಯೇಷ್ಠತೆಯ ನಿರ್ಧಾರಣೆ ಅಧಿನಿಯಮ ರಚಿಸಿತು. 2002ರ ಮತ್ತು 2017ರ ಅಧಿನಿಯಮದ ಪ್ರಕರಣ 3
ಮತ್ತು 4 ಒಂದೇ ಆಗಿದ್ದು ಅದನ್ನು ಸರ್ವೇಚ್ಛ ನ್ಯಾಯಾಲಯವು ಬಿ.ಕೆ. ಪವಿತ್ರ ಪ್ರಕರಣದಲ್ಲಿ
ಅಧಿಕಾರಾತೀತವೆಂದು ಘೊಷಿಸಿ ಅಸಿಂಧುಗೊಳಿಸಿತು. ಈ ರೀತಿ ಅಸಿಂಧುಗೊಂಡ ಪ್ರಕರಣವನ್ನೇ
ಮತ್ತೆ ಹೊಸ ಅಧಿನಿಯಮದಲ್ಲಿ ಅಳವಡಿಸಿಕೊಂಡಿರುವುದು ಸರ್ವೇಚ್ಛ ನ್ಯಾಯಾಲಯದ ತೀರ್ಪಿಗೆ
ವ್ಯತಿರಿಕ್ತವಾಗಿದೆ. 2017ರ ಅಧಿನಿಯಮದ ಪ್ರಕರಣ 2(ಡಿ)ಯಲ್ಲಿ ಹಿಂಬಾಕಿ ಹುದ್ದೆಗಳನ್ನು
ಪದೋನ್ನತಿಗೆ ಸೇರಿಸಲಾಗಿದೆ. ಪ್ರಕರಣ 5ರಲ್ಲಿ ಪುನರಾವಲೋಕನಕ್ಕಾಗಿ ಅವಕಾಶ ಕಲ್ಪಿಸಿ
ರಾಜ್ಯ ಸಿವಿಲ್ ಸೇವೆಗಳಿಗೆ ಸೇರಿದ ಹುದ್ದೆಗಳಿಗೆ ಇರುವ ಎಲ್ಲಾ ಪದೋನ್ನತಿಗಳು ಮೀಸಲಾತಿ
ಆದೇಶಗಳ ವ್ಯಾಪ್ತಿಯೊಳಗೆ ಮತ್ತು ನೇಮಕಾತಿ ವಿಧಾನಕ್ಕೆ ಹಾಗೂ ಜ್ಯೇಷ್ಠತೆಗೆ ಸಂಬಂಧಿಸಿದ
ಇತರ ನಿಯಮಗಳಿಗೆ ಅನುಸಾರವಾಗಿ ಇರತಕ್ಕದ್ದು. ನೇಮಕಾತಿ ಪ್ರಾಧಿಕಾರವು ಪದೋನ್ನತಿಗಳು
ಕ್ರಮಾನುಸಾರವಾಗಿ ಮಾಡಲಾಗುತ್ತಿರುವುದನ್ನು ಖಚಿತಪಡಿಸಿಕೊಳ್ಳಲು ವ್ಯಕ್ತಿತ್ವದಲ್ಲಿರುವ
ಜ್ಯೇಷ್ಠತಾ ಪಟ್ಟಿಗಳನ್ನು ಪುನರಾವಲೋಕಿಸತಕ್ಕದ್ದು ಮತ್ತು ಪುನರಚಿಸತಕ್ಕದ್ದು ಎಂದು
ಸೂಚಿಸಿದೆ. ಇದು ಸಹ ಸರ್ವೇಚ್ಛ ನ್ಯಾಯಾಲಯದ ತೀರ್ಪನ್ನು ಜಾರಿಗೆ ತರುವಲ್ಲಿ
ಗೊಂದಲವನ್ನುಂಟು ಮಾಡಿದೆ. ಇದೇ ಪ್ರಕರಣದ ಪರಂತುಕದಲ್ಲಿ ಪುನರಾವಲೋಕನದ ನಂತರ ಪರಿಶಿಷ್ಟ
ಗುಂಪಿನ ಸರ್ಕಾರಿ ನೌಕರರನ್ನು ಮೀಸಲಾತಿ ಮತ್ತು ಬ್ಯಾಕ್​ಲಾಗ್ ಖಾಲಿ ಸ್ಥಾನಗಳಿಗಿಂತ
ಹೆಚ್ಚಾಗಿ ಅಥವಾ ಮೀಸಲಾತಿ ಕಲ್ಪಿಸಿರುವ ಮೀಸಲಾತಿಗೆ ಪ್ರತಿಯಾಗಿ ಪದೋನ್ನತಿ ನೀಡಿರುವುದು
ಕಂಡು ಬಂದರೆ ಕಾಲಕಾಲಕ್ಕೆ ಹೊರಡಿಸಿದ ಮೀಸಲಾತಿಗೆ ಆದೇಶಕ್ಕನುಸಾರವಾಗಿ ಇರುವ ರೋಸ್ಟರ್
ಬಿಂದುಗಳಿಗೆ ಸಂಬಂಧಿಸಿದಂತೆ ಸೂಕ್ತ ಅರ್ಹತೆ ದಿನಾಂಕಗಳನ್ನು ನಮೂದಿಸಿ
ಸರಿಹೊಂದಿಸತಕ್ಕದ್ದು. ಈಗಾಗಲೇ ಪರಿಶಿಷ್ಟ ಗುಂಪಿನ ವ್ಯಕ್ತಿಗಳು ಪದೋನ್ನತಿ ಹೊಂದಿದ್ದು
ರೋಸ್ಟರ್ ಬಿಂದುಗಳಿಗೆ ಪ್ರತಿಯಾಗಿ ಸರಿಹೊಂದಿಸಲು ಸಾಧ್ಯವಾಗದಿದ್ದರೆ ಪ್ರಸ್ತುತ ಅವರು
ಕಾರ್ಯನಿರ್ವಹಿಸುತ್ತಿರುವ ವೃಂದದಲ್ಲಿ ಅವರು ಪದೋನ್ನತಿ ಪಡೆಯುವ ದಿನಾಂಕದವರೆಗೆ
ಸಂಖ್ಯಾತೀತ ಹುದ್ದೆಗಳಾಗಿ ಮುಂದುವರಿಸತಕ್ಕದ್ದು ಎಂದು ತಿಳಿಸಲಾಗಿದೆ.

5ನೇ ಪ್ರಕರಣವು 3 ಮತ್ತು 4ನೇ ಪ್ರಕರಣಗಳಅನುಷ್ಠಾನದ ಬಗ್ಗೆ ಗೊಂದಲವನ್ನುಂಟು ಮಾಡುತ್ತದೆ.
ಮತ್ತು ರಾಜ್ಯ ಸರ್ಕಾರದಲ್ಲಿ ಈಗಾಗಲೇ ಪರಿಶಿಷ್ಟ ಗುಂಪಿನ 20,000ಕ್ಕಿಂತಲೂ ಹೆಚ್ಚು ನೌಕರರು
ಪದೋನ್ನತಿ ಪಡೆದಿದ್ದು, ಅವರ ಅಕ್ರಮ ಪದೋನ್ನತಿಯನ್ನು ಸಕ್ರಮಗೊಳಿಸಿದಂತಾಗುತ್ತದೆ. ಇದು
ಸಹ ಬಿ.ಕೆ. ಪವಿತ್ರ ಪ್ರಕರಣದ ಆದೇಶಕ್ಕೆ ವಿರುದ್ಧವಾಗಿದೆ.

ಇದೇ ಅಧಿನಿಯಮದ ಪ್ರಕರಣ 9ರಲ್ಲಿ ಈ ಅಧಿನಿಯಮದ ಉಪಬಂಧಗಳಡಿಯಲ್ಲಿ ಸಿಂಧುತ್ವವನ್ನು
ಪ್ರಶ್ನಿಸಲಾಗುತ್ತದೆ. ಈ ಅಧಿನಿಯಮದ 3 ಮತ್ತು 5ನೇ ಪ್ರಕರಣಗಳಿಗೆ ವ್ಯತಿರಿಕ್ತವಾಗಿ ಯಾವುದೇ
ನ್ಯಾಯಾಲಯದ ಅಥವಾ ಇತರ ಪ್ರಾಧಿಕಾರದ ಯಾವುದೇ ತೀರ್ಪು ಅಥವಾ ಆದೇಶದಡಿ ಏನೇ ಒಳಗೊಂಡಿದ್ದರೂ ಈ
ಅಧಿನಿಯಮಕ್ಕೂ ಪ್ರಕಟಣೆ ಪೂರ್ವದಲ್ಲಿ 3 ಮತ್ತು 4 ಪ್ರಕರಣದ ಅನುಸಾರವಾಗಿ ನೀಡಿದ
ಪದೋನ್ನತಿಗಳ ಸಂಬಂಧದಲ್ಲಿ 27.4.1978ನೇ ದಿನಾಂಕದಂದು ಕೈಗೊಂಡ ಕ್ರಮವಾಗಿದೆ ಎಂದು
ಅರ್ಥೈಸಲಾಗಿರುವ ಎಲ್ಲಾ ನಡವಳಿಗಳು ಸಿಂಧುವಾಗಿದೆ ಎಂದು ಸೂಚಿಸಲಾಗಿದೆ. ಪ್ರಕರಣ 9(ಎ)ರಲ್ಲಿ
ಈ ಅಧಿನಿಯಮದ ಉಪಬಂಧಗಳಿಗೆ ವ್ಯತಿರಿಕ್ತವಾಗಿ ಯಾವುದೇ ದಾವೆ ಅಥವಾ ಇತರೆ ನಡವಳಿಗಳನ್ನು ಅಂತಹ
ಬಡ್ತಿಗಳ ಪುನರೀಕ್ಷಣೆಗಾಗಿ ಯಾವುದೇ ನ್ಯಾಯಾಲಯದಲ್ಲಿ ಅಥವಾ ಯಾವುದೇ ಪ್ರಾಧಿಕಾರದ ಮುಂದೆ
ನಿರ್ವಹಿಸತಕ್ಕದ್ದಲ್ಲ ಅಥವಾ ಮುಂದುವರಿಸತಕ್ಕದ್ದಲ್ಲ ಮತ್ತು ಪ್ರಕರಣ 9(ಬಿ)ರಂತೆ ಈ
ಅಧಿನಿಯಮದ ಉಪಬಂಧಗಳಿಗೆ ವಿರುದ್ಧವಾಗಿ ಯಾವುದೇ ಅಂತಹ ಮೊಕದ್ದಮೆಗಳನ್ನು ಪುನರೀಕ್ಷಿಸಲು
ನಿರ್ದೇಶಿಸಿ ಯಾವುದೇ ಡಿಕ್ರಿ ಅಥವಾ ಆದೇಶವನ್ನು  ಯಾವುದೇ ನ್ಯಾಯಾಲಯವು
ಹೊರಡಿಸತಕ್ಕದ್ದಲ್ಲವೆಂದು ತಿಳಿಸಲಾಗಿದೆ. ಈ 9ನೇ ಪ್ರಕರಣವು ಸಂವಿಧಾನದ ಮೂಲಭೂತ
ಹಕ್ಕುಗಳಿಗೆ ಧಕ್ಕೆಯನ್ನುಂಟು ಮಾಡುವಂತಿದೆ. ಬಾಧಿತ ವ್ಯಕ್ತಿಗಳು ಯಾವುದೇ ನ್ಯಾಯಾಲಯದಲ್ಲಿ
ತನಗಾದ ಸ್ವಾಭಾವಿಕ ಅನ್ಯಾಯವನ್ನು ಸರಿಪಡಿಸಿಕೊಳ್ಳಲು ದಾವೆ ಹೂಡತಕ್ಕದ್ದಲ್ಲ ಎನ್ನುವುದು
ಸಂವಿಧಾನ ಬಾಹಿರವಾಗುತ್ತದೆ. ಈ ಅಧಿನಿಯಮದಲ್ಲಿ ನ್ಯಾಯಾಂಗ ವ್ಯವಸ್ಥೆಯೇ ಬೇಡ ಎನ್ನುವಂತೆ
ಪ್ರಕರಣ 9ನ್ನು ಅಳವಡಿಸಿರವುದು ಮೂಲಭೂತ ಹಕ್ಕಿಗೆ ಚ್ಯುತಿಬಂದಂತಾಗುತ್ತದೆ.

ಸರ್ಕಾರವು ದಿನಾಂಕ 23.6.2018ರಿಂದ ಕರ್ನಾಟಕ (ರಾಜ್ಯದ ಸಿವಿಲ್ ಸೇವೆಗಳಲ್ಲಿನ
ಹುದ್ದೆಗಳಿಗೆ ಮೀಸಲಾತಿ ಆಧಾರದ ಮೇಲೆ ಪದೋನ್ನತಿ ಹೊಂದಿರುವ ಸರ್ಕಾರಿ ನೌಕರರಿಗೆ
ತತ್ಪರಿಣಾಮದ ಜ್ಯೇಷ್ಠತೆಯನ್ನು ವಿಸ್ತರಿಸುವ ಅಧಿನಿಯಮ 2017ನ್ನು ಜಾರಿಗೆ ತಂದಿರುತ್ತದೆ.
ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್​ನಲ್ಲಿ ರಿಟ್ ಅರ್ಜಿಗಳು ದಾಖಲಾಗಿದ್ದು ಸದರಿ
ಪ್ರಕರಣಗಳನ್ನು ಬಿ.ಕೆ. ಪವಿತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಕಿ ಇರುವ ಪ್ರಕರಣವನ್ನು
(ಸಂಖ್ಯೆ ಎಂಎ1151/2018) ಒಟ್ಟುಗೂಡಿಸಿ 27.7.2018ರಂದು ವಿಚಾರಣೆಗೆ ಬಂದಾಗ ಮುಂದಿನ
ನಿರ್ದೇಶನ ನೀಡುವವರೆಗೆ ಯಥಾಸ್ಥಿತಿ ಕಾಪಾಡಲು ಸೂಚನೆ ನೀಡಿತು. ಅದರಂತೆ ಮಾನ್ಯ
ಅಡ್ವೋಕೇಟ್ ಜನರಲ್ ಅವರು ಸರ್ಕಾರಕ್ಕೆ ಪತ್ರವನ್ನು ಬರೆದು ಯಥಾ ಸ್ಥಿತಿ ಕಾಪಾಡಲು
ತಿಳಿಸಿರುತ್ತಾರೆ. ಆದುದರಿಂದ ಸರ್ಕಾರವು ದಿನಾಂಕ 3.8.2018ರಂದು (ಸುತ್ತೋಲೆ ಸಂಖ್ಯೆ
ಸಿಆಸುಇ 380, ಸೇನೆನಿ 2018 ಭಾಗ -1) ಸರ್ಕಾರ ಸುತ್ತೋಲೆ ಹೊರಡಿಸಿ ಸರ್ಕಾರದಿಂದ ಮುಂದಿನ
ನಿರ್ದೇಶನ ನೀಡುವವರೆಗೆ ಯಾವುದೇ ಮುಂಬಡ್ತಿ/ಹಿಂಬಡ್ತಿ ಪ್ರಕ್ರಿಯೆ ಜರುಗಿಸದೆ ಯಥಾ ಸ್ಥಿತಿ
ಕಾಪಾಡಬೇಕೆಂದು ಸರ್ಕಾರದ ಎಲ್ಲಾ ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿ/ಇಲಾಖಾ ಮುಖ್ಯಸ್ಥರಿಗೆ
ಸೂಚನೆಗಳನ್ನು ನೀಡಿದೆ. ಈ ಸೂಚನೆಗಳನ್ನು ರಾಜ್ಯ ಸರ್ಕಾರದ ವ್ಯಾಪ್ತಿಗೊಳಪಡುವ ಎಲ್ಲಾ ಸಹಾಯಕ
ಸಂಸ್ಥೆಗಳು/ವಿಶ್ವವಿದ್ಯಾನಿಲಯಗಳು/ಸಾರ್ವಜನಿಕ ಉದ್ದಿಮೆ, ಆಯೋಗ, ನಿಗಮ ಮತ್ತು
ಸರ್ಕಾರದಿಂದ ಅನುದಾನ ಪಡೆಯುವ ಸಂಸ್ಥೆಗಳಿಗೂ ಅನ್ವಯಿಸಿ ಸೂಚಿಸಲಾಗಿದೆ. ಇದರಿಂದಾಗಿ ರಾಜ್ಯ
ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಪದೋನ್ನತಿ ಪಡೆಯಲು ಅರ್ಹರಿದ್ದ ನೌಕರರಿಗೂ
ಲಭ್ಯವಾಗುತ್ತಿಲ್ಲ. ಅಲ್ಲದೆ ಬಿ.ಕೆ. ಪವಿತ್ರ ಪ್ರಕರಣದಡಿಯಲ್ಲಿ
ಹಿಂಬಡ್ತಿ/ಮುಂಬಡ್ತಿಗೊಳಿಸಲು ಸ್ಥಗಿತತೆ ಉಂಟಾಗಿದೆ.

No comments:

Post a Comment

ಅನಿಸಿಕೆ ತಿಳಿಸಿ

ಹೆಚ್ಚು ಓದಿದವು