Thursday, October 25, 2018

**RSGE**::: ಕರ್ತವ್ಯವಲ್ಲದ ಅವಧಿ ಯಾವುದು ?, | ಲ.ರಾಘವೇಂದ್ರ, ಸೇವಾ ಕಾನೂನು ತಜ್ಞರು

ಸರ್ಕಾರಿ ನೌಕರರು ಕಚೇರಿ ಕೆಲಸ ಕಾರ್ಯಗಳಿಗೆ ಹಾಜರಾಗುವ ಎಲ್ಲಾ ದಿನಗಳನ್ನು ಕರ್ತವ್ಯ ದಿನಗಳೆಂದು ಪರಿಗಣಿಸಲಾಗುತ್ತದೆ. ಅದೇ ರೀತಿಯಾಗಿ ಸರ್ಕಾರಿ ನೌಕರನು ಗಳಿಕೆ ರಜೆ, ಪರಿವರ್ತಿತ ರಜೆ, ಸಾಂರ್ದಭಿಕ ರಜೆ, ವಿಶೇಷ ಸಾಂರ್ದಭಿಕ ರಜೆ, ಅನ್ಯ ಕಾರ್ಯನಿಮಿತ್ತ (ಒಒಡಿ) ಸಾರ್ವತ್ರಿಕ ರಜೆ ದಿನಗಳಂದು ಅವನು ಕಚೇರಿಗೆ ಹಾಜರಾಗಿ ಕರ್ತವ್ಯ ನಿರ್ವಹಿಸದಿದ್ದರೂ ಅದನ್ನು ಕರ್ತವ್ಯವೆಂದೇ ಪರಿಗಣಿಸಲಾಗುತ್ತದೆ.
‘ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ’ಯ ನಿಯಮ 8(15)ರಂತೆ ‘ಕರ್ತವ್ಯ’ ಎಂಬುದರಲ್ಲಿ ಸರ್ಕಾರಿ ನೌಕರನು ಪ್ರೊಬೇಷನರ್ ಆಗಿ 1977ರ ‘ಕರ್ನಾಟಕ ಸರ್ಕಾರಿ ಸೇವಾ (ಪ್ರೊಬೇಷನ್) ನಿಯಮ’ಗಳ ಉಪಬಂಧಕ್ಕೆ ಒಳಪಟ್ಟು ಸಲ್ಲಿಸಿದ ಸೇವೆಯನ್ನು ಕರ್ತವ್ಯವೆಂದು ಪರಿಗಣಿಸಲಾಗುತ್ತದೆ. ಅವನು ಸ್ಥಳೀಯ ಅಭ್ಯರ್ಥಿಯಾಗಿ ಸಲ್ಲಿಸಿದ ಸೇವೆಯನ್ನು ವಾರ್ಷಿಕ ವೇತನ ಬಡ್ತಿ, ರಜೆ, ನಿವೃತ್ತಿ ವೇತನ ಇತ್ಯಾದಿಗಳ ಉದ್ದೇಶಕ್ಕಾಗಿ ಸ್ಥಾನಪನ್ನ ಅಥವಾ ಹಂಗಾಮಿ ಸೇವೆಯನ್ನು ಪರಿಗಣಿಸಲಾಗುತ್ತದೆ. ಆದರೆ ಸರ್ಕಾರಿ ನೌಕರನು ಕೆಲವೊಂದು ಸಂದರ್ಭಗಳಲ್ಲಿ ಅವನ ಸೇವೆಯನ್ನು ಕರ್ತವ್ಯವಲ್ಲದ ಸೇವೆಯೆಂದು ಪರಿಗಣಿಸಲಾಗುತ್ತದೆ. ‘ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ’ಯ ನಿಯಮ 8(14ಎ)ರೀತ್ಯ ಕರ್ತವ್ಯರಹಿತ ಅವಧಿ ಅಥವಾ ಕರ್ತವ್ಯದಲ್ಲಿ ಕಳೆಯದ ಅವಧಿಯನ್ನು ‘ಲೆಕ್ಕಕ್ಕಿಲ್ಲದ ಅವಧಿ’ಯೆಂದು ಪರಿಭಾಷಿಸಿದೆ. ಈ ‘ಲೆಕ್ಕಕ್ಕಿಲ್ಲದ ಅವಧಿ’ ಎಂದು ಪರಿಗಣಿಸಿದ ಅವಧಿಯನ್ನು ಸೇವೆಯೆಂದು ತೆಗೆದುಕೊಳ್ಳಲಾಗುವುದಿಲ್ಲ. ಆದರೆ ಈ ಅವಧಿಯನ್ನು ‘ಸೇವಾಭಂಗ’ ಎಂದು ಭಾವಿಸಲಾಗುವುದಿಲ್ಲವೆಂದು ಸ್ಪಷ್ಟಪಡಿಸಲಾಗಿದೆ. ಈ ಕರ್ತವ್ಯವಲ್ಲದ ಅವಧಿಯಲ್ಲಿ ರಜೆ, ವಾರ್ಷಿಕವೇತನ ಬಡ್ತಿ ಮತ್ತು ಪಿಂಚಣಿಗೆ ಅರ್ಹತಾದಾಯಕ ಸೇವೆಯೆಂದು ಪರಿಗಣಿಸಲಾಗುವುದಿಲ್ಲ. ‘ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ’ 220ರ ರೀತ್ಯ 18 ವರ್ಷಗಳು ಆಗುವ ಮುನ್ನ ಸರ್ಕಾರಿ ಸೇವೆಗೆ ಸೇರಿದರೆ ಅದನ್ನೂ ‘ಕರ್ತವ್ಯವಲ್ಲದ ಅವಧಿ’ಯೆಂದು (ಬಾಯ್್ಸ ಸರ್ವೀಸ್) ಎಂದು ಪರಿಗಣಿಸಲಾಗುತ್ತದೆ. ಅಲ್ಲದೆ ಸರ್ಕಾರಿ ನೌಕರನು ಮೂರು ವರ್ಷಕ್ಕಿಂತ ಹೆಚ್ಚು ಅಸಾಧಾರಣ ರಜೆ ಅಥವಾ ವೇತನರಹಿತ ರಜೆಯನ್ನು ಬಳಸಿಕೊಂಡಲ್ಲಿ ಅದನ್ನೂ ಕರ್ತವ್ಯವಲ್ಲದ ಅವಧಿಯೆಂದು ಪರಿಗಣಿಸಲಾಗುತ್ತದೆ ಹಾಗೂ ಒಟ್ಟು ಅರ್ಹತಾದಾಯಕ ಸೇವೆಯಿಂದ ಕಳೆಯಲಾಗುತ್ತದೆ.
ಛತ್ತೀಸ್​ಗಡ ಹೈಕೋರ್ಟ್​ನಲ್ಲಿ ಮಕ್ಕಳ ಕಲ್ಯಾಣ ಅಧಿಕಾರಿಯೊಬ್ಬರು 200ಕ್ಕೂ ಹೆಚ್ಚು ದಿನಗಳ ಕಾಲ ಗೈರು ಹಾಜರಾಗಿದ್ದಕ್ಕೆ ಅದನ್ನು ಅವನ ವೆುೕಲಧಿಕಾರಿಗಳು ‘ಕರ್ತವ್ಯವಲ್ಲದ ಅವಧಿ’ಯೆಂದು ಪರಿಗಣಿಸಿರುವುದನ್ನು ಎತ್ತಿ ಹಿಡಿದಿದೆ. ಈ ಪ್ರಕರಣದಲ್ಲಿ ಮೇಲಧಿಕಾರಿಯವರು ತಮ್ಮ ಅಹವಾಲನ್ನು ಪರಿಗಣಿಸದೆ ಕರ್ತವ್ಯವಲ್ಲದ ಅವಧಿಯೆಂದು (ಡೈಸ್​ನಾನ್) ಪರಿಗಣಿಸಿರುವುದು ಸ್ವಾಭಾವಿಕ ನ್ಯಾಯಕ್ಕೆ ವ್ಯತಿರಿಕ್ತವಾಗಿದೆಯೆಂದು ಕೋರಿ ಆ ಅಧಿಕಾರಿಯು ರಿಟ್ ಅರ್ಜಿಯನ್ನು ಸಲ್ಲಿಸುತ್ತಾರೆ. (ರಿಟ್ ಅರ್ಜಿ ಸಂಖ್ಯೆ 101-2006) ಆದರೆ ನ್ಯಾಯಾಲಯವು ಅವರ ಮೇಲಧಿಕಾರಿಯವರು ಕೈಗೊಂಡ ಕ್ರಮವನ್ನು ಎತ್ತಿ ಹಿಡಿದು ಅವರ ಅರ್ಜಿಯನ್ನು ಅಂತ್ಯಗೊಳಿಸಿರುತ್ತದೆ. ಈ ಪ್ರಕರಣದಲ್ಲಿ ಈ ಅವಧಿಯು ರಜೆ, ವಾರ್ಷಿಕ ವೇತನ ಬಡ್ತಿ ಅದು ನಿವೃತ್ತಿಗೆ ಪರಿಗಣಿತವಾಗುವುದಿಲ್ಲವಾದ್ದರಿಂದ ಇದೊಂದು ರೀತಿಯ ದಂಡನೆಯಾಗಿರುತ್ತದೆ. ಸಂದರ್ಭ ಹೀಗಿರುವಾಗ ಸೇವಾ ನಿಯಮಗಳಡಿಯಲ್ಲಿ ಶಿಸ್ತು ಕ್ರಮವನ್ನು ಅನುಸರಿಸಿ ತೀರ್ವನವನ್ನು ತೆಗೆದುಕ್ಳೊಲಾಗುತ್ತದೆ ಎಂದು ನ್ಯಾಯಾಲಯ ಸೂಚಿಸಿ ಪ್ರಕರಣವನ್ನು ಮುಕ್ತಾಯಗೊಳಿಸುತ್ತದೆ.
ಸರ್ಕಾರಿ ನೌಕರನು ಯಾವುದೇ ಸಂದರ್ಭದಲ್ಲಿ ಗೈರು ಹಾಜರಾದರೆ ಮೇಲಧಿಕಾರಿಗೆ ಅವನ ವಿರುದ್ಧ ಕ್ರಮ ಕೈಗೊಳ್ಳಲು ಎರಡು ಅವಕಾಶಗಳಿರುತ್ತವೆ. ಮೊದಲನೆಯದಾಗಿ ನೌಕರನ ಗೈರು ಹಾಜರಿಗೆ ಸಮಂಜಸವಾದ ಕಾರಣವಿದ್ದರೆ ಅವನ ಅನಧಿಕೃತ ಗೈರು ಹಾಜರಿಯನ್ನು ಸಕ್ರಮಗೊಳಿಸಿ ರಜೆ ಮಂಜೂರು ಮಾಡಬಹುದು. ಎರಡನೆಯದಾಗಿ ನೌಕರರ ಗೈರು ಹಾಜರಿಗೆ ಸಮಂಜಸವಾದ ಕಾರಣಗಳಿಲ್ಲದೆ ಸಿಸಿಎ ನಿಯಮಾನುಸಾರ ಕ್ರಮ ಜರುಗಿಸಿ ದಂಡನೆಯನ್ನು ವಿಧಿಸಬಹುದಾಗಿರುತ್ತದೆ. ನಿಯಮ 108ರ ಪ್ರಕಾರ ನಾಲ್ಕು ತಿಂಗಳಿಗಿಂತ ಹೆಚ್ಚಿಗೆ ಅನಧಿಕೃತವಾಗಿ ಗೈರು ಹಾಜರಾದರೆ ಸೇವೆಯಿಂದ ಶಿಸ್ತು ಕ್ರಮ ಕೈಗೊಂಡು ವಜಾಗೊಳಿಸಬಹುದು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಾಥಮಿಕ ಶಾಲಾ ಶಿಕ್ಷಕರು ಬಿ.ಎಡ್., ಪದವಿಯನ್ನು ಪಡೆಯಲು ಅವಕಾಶವನ್ನು ಕಲ್ಪಿಸಿದ್ದು ದಿನಾಂಕ 2.9.2006ರ ಸುತ್ತೋಲೆ ಸಂಖ್ಯೆ ಸಿ 3(2) ಪ್ರಾಶಿ/ಉವ್ಯಾ /ಅನು/07/2006-2007ರಂತೆ ಕನಿಷ್ಠ 5 ವರ್ಷಗಳ ಸೇವಾ ಅವಧಿ ಸಲ್ಲಿಸಿ ಕಾಯಂಪೂರ್ವ ಸೇವಾವಧಿಯನ್ನು (ಪ್ರೊಬೇಷನ್) ಘೊಷಿಸಿದ್ದರೆ ಅಂತಹ ಶಿಕ್ಷಕನು ಛಾಪಾ ಕಾಗದದ ಮೇಲೆ ಮುಚ್ಚಳಿಕೆಯನ್ನು ಬರೆದುಕೊಡಬೇಕು. ಈ ಮುಚ್ಚಳಿಕೆಯಲ್ಲಿ ‘ನಾನು ಉನ್ನತ ವ್ಯಾಸಂಗದ ಅವಧಿಯನ್ನು ಲೆಕ್ಕಕ್ಕಿಲ್ಲದ ಅವಧಿಯೆಂದು ಪರಿಗಣಿಸಲು ಸ್ವ ಇಚ್ಛೆಯಿಂದ ಒಪ್ಪಿಕೊಂಡಿರುತ್ತೇನೆ. ಈ ಉನ್ನತ ವ್ಯಾಸಂಗದ ಅವಧಿಯಲ್ಲಿ ವೇತನ ಬಡ್ತಿ, ನಿವೃತ್ತಿ ವೇತನ, ರಜೆ ಸೌಲಭ್ಯ ಮತ್ತು ಯಾವುದೇ ಆರ್ಥಿಕ ಸೌಲಭ್ಯಗಳನ್ನು ಅರ್ಹತಾದಾಯಕ ಸೇವೆಗೆ ಪರಿಗಣಿಸದಿರುವಂತೆ ಈ ಮೂಲಕ ಸ್ವ ಇಚ್ಛೆಯಿಂದ ಒಪ್ಪಿಕೊಂಡು ಬರೆದುಕೊಟ್ಟಿರುತ್ತೇನೆ ಎಂದು ಇರಬೇಕು. ಆದ್ದರಿಂದ ಈ ಅವಧಿಯು ಕರ್ತವ್ಯವಲ್ಲದ ಅವಧಿಯೆಂದು ಪರಿಗಣಿತವಾಗುತ್ತದೆ.
ಅಲ್ಲದೆ ಸರ್ಕಾರಿ ನೌಕರನು ಸ್ವ ಮನವಿಯ ಮೇರೆಗೆ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ವರ್ಗಾವಣೆ ಮಾಡಿಸಿಕೊಂಡಾಗ ಈ ನಿಯಮದ ಪ್ರಕಾರ ಸೇರಿಕೆ ಕಾಲ ಲಭ್ಯವಾಗುವುದಿಲ್ಲ. ಅವನು ಕಾರಣಾಂತರಗಳಿಂದ ಸಕಾಲಿಕವಾಗಿ ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಾಗುವುದಿಲ್ಲ. ಆಗ ಅವನು ಪ್ರಯಾಣಕ್ಕಾಗಿ ತೆಗೆದುಕೊಂಡ ವಾಸ್ತವ ಅವಧಿಯನ್ನು ಕರ್ತವ್ಯವಲ್ಲದ ದಿನವೆಂದು ನಿಯಮ 76 (3)ರ ಮೇರೆಗೆ ಪರಿಗಣಿಸಬೇಕು ಮತ್ತು ಅದನ್ನು ವಾರ್ಷಿಕ ವೇತನ ಬಡ್ತಿ ಮತ್ತು ನಿವೃತ್ತಿ ವೇತನಕ್ಕೆ ಪರಿಗಣಿಸಲಾಗುವುದಿಲ್ಲ. ಆದರೆ ಇಂತಹ ಅವಧಿಗೆ ವರ್ಗಾವಣೆ ದಿನಾಂಕದಂದು ಅವನ ಲೆಕ್ಕದಲ್ಲಿರುವ ಮತ್ತು ಪಡೆಯಲು ಅರ್ಹವಾದ ರಜೆಯನ್ನು  ಸಾರ್ವಜನಿಕ ಹಿತದೃಷ್ಟಿಯಿಂದ ವರ್ಗಾವಣೆಯಾಗಿದ್ದಲ್ಲಿ ಲಭ್ಯವಿರುವ ಸೇರುವ ಕಾಲದ ಅವಧಿಗೆ ಮೀರದಂತೆ ರಜೆಯನ್ನು ಮಂಜೂರು ಮಾಡಬಹುದೆಂದು 1990ರ ಸರ್ಕಾರಿ ಜ್ಞಾಪನ (ಸಂಖ್ಯೆ ಎಫ್​ಡಿ 22, ಎಸ್​ಆರ್​ಎಸ್ 90) ತಿಳಿಸಿದೆ.

2 comments:

  1. ಸರ್ ನಮಸ್ಕಾರಗಳು ತಮಗೆ,ನಾನು ಯಾದಗಿರಿ ತಾಲ್ಲೂಕಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಕನಾಗಿ ಕಳೆದ 10 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇನೆ.ಈಗ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ನೇಮಕಾತಿ ಪ್ರಾಧಿಕಾರದ ಅನುಮತಿಯನ್ನು (ನಿರಪೇಕ್ಷಣಾ ಪತ್ರ) ಪಡೆದುಕೊಂಡು ಪರೀಕ್ಷೆಯನ್ನು ಬರೆಯಲು ಉತ್ಸುಕನಾಗದ್ದೇನೆ.ಜೊತೆಗೆ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ತುಂಬ ಸನಿಹವಿದೆ.ಒಂದು ವೇಳೆ ಸಹಾಯಕ ಪ್ರಾಧ್ಯಾಪಕನಾಗಿ ಆಯ್ಕೆ ಆಗುವ ಮುನ್ನವೇ ನಾನು ವರ್ಗಾವಣೆ ಹೊಂದಿದರೆ, ನಮ್ಮ ಕ್ಷೇತ್ರ ಶಿಕ್ಷಣಾಧಿಕಾರಿಗಳು ಬದಲಾಗುತ್ತಾರೆ.ಯಾದಗಿರಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ನೀಡಿದ ನಿರಪೇಕ್ಷಣಾ ಪತ್ರವನ್ನು ಸುರಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪರಿಗಣಿಸುವರೆ? ದಯವಿಟ್ಟು ತಿಳಿಸಿರಿ ಸರ್.

    ReplyDelete
  2. ನಾನು ಸರಕಾರಿ ಪ್ರೌಢ ಶಾಲಾ ಶಿಕ್ಷಕ. ನನಗೆ ಒಂದು ವರ್ಷದಲ್ಲಿ ಎರಡು ಪರಿಮಿತ ರಜೆಯ ( R.H.) ಸೌಲಭ್ಯವನ್ನು ಪಡೆಯಲು ಅವಕಾಶವಿದೆ. ಅವಕಾಶವಿದ್ದಲ್ಲಿ ಈ ಎರಡೂ ರಜೆಗಳನ್ನು ನಾನು ಒಮ್ಮೆಗೆ ಬಳಸಿಕೊಳ್ಳಬಹುದೆ ಎಂಬುದನ್ನು ದಯವಿಟ್ತು ತಿಳಿಸಿ.

    ReplyDelete

ಅನಿಸಿಕೆ ತಿಳಿಸಿ

ಹೆಚ್ಚು ಓದಿದವು