Thursday, October 25, 2018

**RSGE**::: ಸರ್ಕಾರಿ ಕಾರ್ನರ್​

ಭೂಮಾಪನ ಇಲಾಖೆಯಲ್ಲಿ ಭೂಮಾಪಕರಾಗಿದ್ದ ನನ್ನ ತಂದೆ 2018ರ ಆ.18ರಂದು ಆಕಸ್ಮಿಕವಾಗಿ ನಿಧನರಾದರು. ನಾನು ಸ್ನಾತಕೋತ್ತರ ಪದವೀಧರನಾಗಿದ್ದು, ಪ್ರಥಮ ದರ್ಜೆ ಸಹಾಯಕ ಹುದ್ದೆ ನೀಡಲು ಕೋರಿದಾಗ ಸಕ್ಷಮ ಅಧಿಕಾರಿಯು ದ್ವಿತೀಯ ದರ್ಜೆ ಸಹಾಯಕ ಹುದ್ದೆ ಅಂಗೀಕರಿಸಿದ್ದಾರೆ. ಸದ್ಯ ದ್ವಿತೀಯ ದರ್ಜೆ ಸಹಾಯಕನಾಗಿರುವ ನಾನು ಪ್ರಥಮದರ್ಜೆ ಸಹಾಯಕ ಹುದ್ದೆಗೆ ನಿಯೋಜಿಸುವಂತೆ ಮತ್ತೆ ಮನವಿ ಸಲ್ಲಿಸಬಹುದೇ? ಇಲಾಖೆ ಕೈಗೊಂಡ ನಿರ್ಧಾರ ಕ್ರಮಬದ್ಧವಾಗಿದೆಯೇ?
| ಬಿ.ಕೆ. ಕುಲಕರ್ಣಿ ವಿಜಯಪುರ
ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಮೇರೆಗೆ ನೇಮಕ) ನಿಯಮಾವಳಿ 1996ರ ನಿಯಮ 3ರ ಪ್ರಕಾರ ಅನುಕಂಪದ ಮೇರೆಗೆ ನೇಮಕವಾಗಲು ನಿಗದಿತ ವಿದ್ಯಾರ್ಹತೆ ಹೊಂದಿದ್ದರೆ ಅರ್ಹರಾಗುತ್ತಾರೆ. 2017ರ ಅ.27ರ ಸರ್ಕಾರಿ ಸುತ್ತೋಲೆ ಸಂಖ್ಯೆ ಸಿಆಸುಇ 105, ಸೇಅನೇ 2017ರ ಪ್ರಕಾರ ಅನುಕಂಪದ ಆಧಾರದ ಮೇಲೆ ನೇಮಕಾತಿ ಸಂದರ್ಭ ಅರ್ಜಿದಾರರ ಅರ್ಜಿ ಪರಿಗಣಿಸುವಾಗ ಆತನ ವಿದ್ಯಾರ್ಹತೆಗೆ ಅನುಸಾರವಾಗಿಯೇ ಗ್ರೂಪ್ ಸಿ ಅಥವಾ ಡಿ ಹುದ್ದೆಗೆ ನೇಮಕಾತಿ ಆದೇಶ ಹೊರಡಿಸಬೇಕೆಂದು ಸೂಚಿಸಲಾಗಿರುತ್ತದೆ. ಹಾಗಾಗಿ ನೀವು ಮತ್ತೆ ನೇಮಕಾತಿ ಪ್ರಾಧಿಕಾರಕ್ಕೆ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ಮರು ನೇಮಕ ಮಾಡಿಕೊಳ್ಳುವಂತೆ ಮನವಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ’ ಪುಸ್ತಕ ನೋಡಬಹುದು.

**RSGE**::: ಕರ್ತವ್ಯವಲ್ಲದ ಅವಧಿ ಯಾವುದು ?, | ಲ.ರಾಘವೇಂದ್ರ, ಸೇವಾ ಕಾನೂನು ತಜ್ಞರು

ಸರ್ಕಾರಿ ನೌಕರರು ಕಚೇರಿ ಕೆಲಸ ಕಾರ್ಯಗಳಿಗೆ ಹಾಜರಾಗುವ ಎಲ್ಲಾ ದಿನಗಳನ್ನು ಕರ್ತವ್ಯ ದಿನಗಳೆಂದು ಪರಿಗಣಿಸಲಾಗುತ್ತದೆ. ಅದೇ ರೀತಿಯಾಗಿ ಸರ್ಕಾರಿ ನೌಕರನು ಗಳಿಕೆ ರಜೆ, ಪರಿವರ್ತಿತ ರಜೆ, ಸಾಂರ್ದಭಿಕ ರಜೆ, ವಿಶೇಷ ಸಾಂರ್ದಭಿಕ ರಜೆ, ಅನ್ಯ ಕಾರ್ಯನಿಮಿತ್ತ (ಒಒಡಿ) ಸಾರ್ವತ್ರಿಕ ರಜೆ ದಿನಗಳಂದು ಅವನು ಕಚೇರಿಗೆ ಹಾಜರಾಗಿ ಕರ್ತವ್ಯ ನಿರ್ವಹಿಸದಿದ್ದರೂ ಅದನ್ನು ಕರ್ತವ್ಯವೆಂದೇ ಪರಿಗಣಿಸಲಾಗುತ್ತದೆ.
‘ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ’ಯ ನಿಯಮ 8(15)ರಂತೆ ‘ಕರ್ತವ್ಯ’ ಎಂಬುದರಲ್ಲಿ ಸರ್ಕಾರಿ ನೌಕರನು ಪ್ರೊಬೇಷನರ್ ಆಗಿ 1977ರ ‘ಕರ್ನಾಟಕ ಸರ್ಕಾರಿ ಸೇವಾ (ಪ್ರೊಬೇಷನ್) ನಿಯಮ’ಗಳ ಉಪಬಂಧಕ್ಕೆ ಒಳಪಟ್ಟು ಸಲ್ಲಿಸಿದ ಸೇವೆಯನ್ನು ಕರ್ತವ್ಯವೆಂದು ಪರಿಗಣಿಸಲಾಗುತ್ತದೆ. ಅವನು ಸ್ಥಳೀಯ ಅಭ್ಯರ್ಥಿಯಾಗಿ ಸಲ್ಲಿಸಿದ ಸೇವೆಯನ್ನು ವಾರ್ಷಿಕ ವೇತನ ಬಡ್ತಿ, ರಜೆ, ನಿವೃತ್ತಿ ವೇತನ ಇತ್ಯಾದಿಗಳ ಉದ್ದೇಶಕ್ಕಾಗಿ ಸ್ಥಾನಪನ್ನ ಅಥವಾ ಹಂಗಾಮಿ ಸೇವೆಯನ್ನು ಪರಿಗಣಿಸಲಾಗುತ್ತದೆ. ಆದರೆ ಸರ್ಕಾರಿ ನೌಕರನು ಕೆಲವೊಂದು ಸಂದರ್ಭಗಳಲ್ಲಿ ಅವನ ಸೇವೆಯನ್ನು ಕರ್ತವ್ಯವಲ್ಲದ ಸೇವೆಯೆಂದು ಪರಿಗಣಿಸಲಾಗುತ್ತದೆ. ‘ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ’ಯ ನಿಯಮ 8(14ಎ)ರೀತ್ಯ ಕರ್ತವ್ಯರಹಿತ ಅವಧಿ ಅಥವಾ ಕರ್ತವ್ಯದಲ್ಲಿ ಕಳೆಯದ ಅವಧಿಯನ್ನು ‘ಲೆಕ್ಕಕ್ಕಿಲ್ಲದ ಅವಧಿ’ಯೆಂದು ಪರಿಭಾಷಿಸಿದೆ. ಈ ‘ಲೆಕ್ಕಕ್ಕಿಲ್ಲದ ಅವಧಿ’ ಎಂದು ಪರಿಗಣಿಸಿದ ಅವಧಿಯನ್ನು ಸೇವೆಯೆಂದು ತೆಗೆದುಕೊಳ್ಳಲಾಗುವುದಿಲ್ಲ. ಆದರೆ ಈ ಅವಧಿಯನ್ನು ‘ಸೇವಾಭಂಗ’ ಎಂದು ಭಾವಿಸಲಾಗುವುದಿಲ್ಲವೆಂದು ಸ್ಪಷ್ಟಪಡಿಸಲಾಗಿದೆ. ಈ ಕರ್ತವ್ಯವಲ್ಲದ ಅವಧಿಯಲ್ಲಿ ರಜೆ, ವಾರ್ಷಿಕವೇತನ ಬಡ್ತಿ ಮತ್ತು ಪಿಂಚಣಿಗೆ ಅರ್ಹತಾದಾಯಕ ಸೇವೆಯೆಂದು ಪರಿಗಣಿಸಲಾಗುವುದಿಲ್ಲ. ‘ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ’ 220ರ ರೀತ್ಯ 18 ವರ್ಷಗಳು ಆಗುವ ಮುನ್ನ ಸರ್ಕಾರಿ ಸೇವೆಗೆ ಸೇರಿದರೆ ಅದನ್ನೂ ‘ಕರ್ತವ್ಯವಲ್ಲದ ಅವಧಿ’ಯೆಂದು (ಬಾಯ್್ಸ ಸರ್ವೀಸ್) ಎಂದು ಪರಿಗಣಿಸಲಾಗುತ್ತದೆ. ಅಲ್ಲದೆ ಸರ್ಕಾರಿ ನೌಕರನು ಮೂರು ವರ್ಷಕ್ಕಿಂತ ಹೆಚ್ಚು ಅಸಾಧಾರಣ ರಜೆ ಅಥವಾ ವೇತನರಹಿತ ರಜೆಯನ್ನು ಬಳಸಿಕೊಂಡಲ್ಲಿ ಅದನ್ನೂ ಕರ್ತವ್ಯವಲ್ಲದ ಅವಧಿಯೆಂದು ಪರಿಗಣಿಸಲಾಗುತ್ತದೆ ಹಾಗೂ ಒಟ್ಟು ಅರ್ಹತಾದಾಯಕ ಸೇವೆಯಿಂದ ಕಳೆಯಲಾಗುತ್ತದೆ.
ಛತ್ತೀಸ್​ಗಡ ಹೈಕೋರ್ಟ್​ನಲ್ಲಿ ಮಕ್ಕಳ ಕಲ್ಯಾಣ ಅಧಿಕಾರಿಯೊಬ್ಬರು 200ಕ್ಕೂ ಹೆಚ್ಚು ದಿನಗಳ ಕಾಲ ಗೈರು ಹಾಜರಾಗಿದ್ದಕ್ಕೆ ಅದನ್ನು ಅವನ ವೆುೕಲಧಿಕಾರಿಗಳು ‘ಕರ್ತವ್ಯವಲ್ಲದ ಅವಧಿ’ಯೆಂದು ಪರಿಗಣಿಸಿರುವುದನ್ನು ಎತ್ತಿ ಹಿಡಿದಿದೆ. ಈ ಪ್ರಕರಣದಲ್ಲಿ ಮೇಲಧಿಕಾರಿಯವರು ತಮ್ಮ ಅಹವಾಲನ್ನು ಪರಿಗಣಿಸದೆ ಕರ್ತವ್ಯವಲ್ಲದ ಅವಧಿಯೆಂದು (ಡೈಸ್​ನಾನ್) ಪರಿಗಣಿಸಿರುವುದು ಸ್ವಾಭಾವಿಕ ನ್ಯಾಯಕ್ಕೆ ವ್ಯತಿರಿಕ್ತವಾಗಿದೆಯೆಂದು ಕೋರಿ ಆ ಅಧಿಕಾರಿಯು ರಿಟ್ ಅರ್ಜಿಯನ್ನು ಸಲ್ಲಿಸುತ್ತಾರೆ. (ರಿಟ್ ಅರ್ಜಿ ಸಂಖ್ಯೆ 101-2006) ಆದರೆ ನ್ಯಾಯಾಲಯವು ಅವರ ಮೇಲಧಿಕಾರಿಯವರು ಕೈಗೊಂಡ ಕ್ರಮವನ್ನು ಎತ್ತಿ ಹಿಡಿದು ಅವರ ಅರ್ಜಿಯನ್ನು ಅಂತ್ಯಗೊಳಿಸಿರುತ್ತದೆ. ಈ ಪ್ರಕರಣದಲ್ಲಿ ಈ ಅವಧಿಯು ರಜೆ, ವಾರ್ಷಿಕ ವೇತನ ಬಡ್ತಿ ಅದು ನಿವೃತ್ತಿಗೆ ಪರಿಗಣಿತವಾಗುವುದಿಲ್ಲವಾದ್ದರಿಂದ ಇದೊಂದು ರೀತಿಯ ದಂಡನೆಯಾಗಿರುತ್ತದೆ. ಸಂದರ್ಭ ಹೀಗಿರುವಾಗ ಸೇವಾ ನಿಯಮಗಳಡಿಯಲ್ಲಿ ಶಿಸ್ತು ಕ್ರಮವನ್ನು ಅನುಸರಿಸಿ ತೀರ್ವನವನ್ನು ತೆಗೆದುಕ್ಳೊಲಾಗುತ್ತದೆ ಎಂದು ನ್ಯಾಯಾಲಯ ಸೂಚಿಸಿ ಪ್ರಕರಣವನ್ನು ಮುಕ್ತಾಯಗೊಳಿಸುತ್ತದೆ.
ಸರ್ಕಾರಿ ನೌಕರನು ಯಾವುದೇ ಸಂದರ್ಭದಲ್ಲಿ ಗೈರು ಹಾಜರಾದರೆ ಮೇಲಧಿಕಾರಿಗೆ ಅವನ ವಿರುದ್ಧ ಕ್ರಮ ಕೈಗೊಳ್ಳಲು ಎರಡು ಅವಕಾಶಗಳಿರುತ್ತವೆ. ಮೊದಲನೆಯದಾಗಿ ನೌಕರನ ಗೈರು ಹಾಜರಿಗೆ ಸಮಂಜಸವಾದ ಕಾರಣವಿದ್ದರೆ ಅವನ ಅನಧಿಕೃತ ಗೈರು ಹಾಜರಿಯನ್ನು ಸಕ್ರಮಗೊಳಿಸಿ ರಜೆ ಮಂಜೂರು ಮಾಡಬಹುದು. ಎರಡನೆಯದಾಗಿ ನೌಕರರ ಗೈರು ಹಾಜರಿಗೆ ಸಮಂಜಸವಾದ ಕಾರಣಗಳಿಲ್ಲದೆ ಸಿಸಿಎ ನಿಯಮಾನುಸಾರ ಕ್ರಮ ಜರುಗಿಸಿ ದಂಡನೆಯನ್ನು ವಿಧಿಸಬಹುದಾಗಿರುತ್ತದೆ. ನಿಯಮ 108ರ ಪ್ರಕಾರ ನಾಲ್ಕು ತಿಂಗಳಿಗಿಂತ ಹೆಚ್ಚಿಗೆ ಅನಧಿಕೃತವಾಗಿ ಗೈರು ಹಾಜರಾದರೆ ಸೇವೆಯಿಂದ ಶಿಸ್ತು ಕ್ರಮ ಕೈಗೊಂಡು ವಜಾಗೊಳಿಸಬಹುದು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಾಥಮಿಕ ಶಾಲಾ ಶಿಕ್ಷಕರು ಬಿ.ಎಡ್., ಪದವಿಯನ್ನು ಪಡೆಯಲು ಅವಕಾಶವನ್ನು ಕಲ್ಪಿಸಿದ್ದು ದಿನಾಂಕ 2.9.2006ರ ಸುತ್ತೋಲೆ ಸಂಖ್ಯೆ ಸಿ 3(2) ಪ್ರಾಶಿ/ಉವ್ಯಾ /ಅನು/07/2006-2007ರಂತೆ ಕನಿಷ್ಠ 5 ವರ್ಷಗಳ ಸೇವಾ ಅವಧಿ ಸಲ್ಲಿಸಿ ಕಾಯಂಪೂರ್ವ ಸೇವಾವಧಿಯನ್ನು (ಪ್ರೊಬೇಷನ್) ಘೊಷಿಸಿದ್ದರೆ ಅಂತಹ ಶಿಕ್ಷಕನು ಛಾಪಾ ಕಾಗದದ ಮೇಲೆ ಮುಚ್ಚಳಿಕೆಯನ್ನು ಬರೆದುಕೊಡಬೇಕು. ಈ ಮುಚ್ಚಳಿಕೆಯಲ್ಲಿ ‘ನಾನು ಉನ್ನತ ವ್ಯಾಸಂಗದ ಅವಧಿಯನ್ನು ಲೆಕ್ಕಕ್ಕಿಲ್ಲದ ಅವಧಿಯೆಂದು ಪರಿಗಣಿಸಲು ಸ್ವ ಇಚ್ಛೆಯಿಂದ ಒಪ್ಪಿಕೊಂಡಿರುತ್ತೇನೆ. ಈ ಉನ್ನತ ವ್ಯಾಸಂಗದ ಅವಧಿಯಲ್ಲಿ ವೇತನ ಬಡ್ತಿ, ನಿವೃತ್ತಿ ವೇತನ, ರಜೆ ಸೌಲಭ್ಯ ಮತ್ತು ಯಾವುದೇ ಆರ್ಥಿಕ ಸೌಲಭ್ಯಗಳನ್ನು ಅರ್ಹತಾದಾಯಕ ಸೇವೆಗೆ ಪರಿಗಣಿಸದಿರುವಂತೆ ಈ ಮೂಲಕ ಸ್ವ ಇಚ್ಛೆಯಿಂದ ಒಪ್ಪಿಕೊಂಡು ಬರೆದುಕೊಟ್ಟಿರುತ್ತೇನೆ ಎಂದು ಇರಬೇಕು. ಆದ್ದರಿಂದ ಈ ಅವಧಿಯು ಕರ್ತವ್ಯವಲ್ಲದ ಅವಧಿಯೆಂದು ಪರಿಗಣಿತವಾಗುತ್ತದೆ.
ಅಲ್ಲದೆ ಸರ್ಕಾರಿ ನೌಕರನು ಸ್ವ ಮನವಿಯ ಮೇರೆಗೆ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ವರ್ಗಾವಣೆ ಮಾಡಿಸಿಕೊಂಡಾಗ ಈ ನಿಯಮದ ಪ್ರಕಾರ ಸೇರಿಕೆ ಕಾಲ ಲಭ್ಯವಾಗುವುದಿಲ್ಲ. ಅವನು ಕಾರಣಾಂತರಗಳಿಂದ ಸಕಾಲಿಕವಾಗಿ ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಾಗುವುದಿಲ್ಲ. ಆಗ ಅವನು ಪ್ರಯಾಣಕ್ಕಾಗಿ ತೆಗೆದುಕೊಂಡ ವಾಸ್ತವ ಅವಧಿಯನ್ನು ಕರ್ತವ್ಯವಲ್ಲದ ದಿನವೆಂದು ನಿಯಮ 76 (3)ರ ಮೇರೆಗೆ ಪರಿಗಣಿಸಬೇಕು ಮತ್ತು ಅದನ್ನು ವಾರ್ಷಿಕ ವೇತನ ಬಡ್ತಿ ಮತ್ತು ನಿವೃತ್ತಿ ವೇತನಕ್ಕೆ ಪರಿಗಣಿಸಲಾಗುವುದಿಲ್ಲ. ಆದರೆ ಇಂತಹ ಅವಧಿಗೆ ವರ್ಗಾವಣೆ ದಿನಾಂಕದಂದು ಅವನ ಲೆಕ್ಕದಲ್ಲಿರುವ ಮತ್ತು ಪಡೆಯಲು ಅರ್ಹವಾದ ರಜೆಯನ್ನು  ಸಾರ್ವಜನಿಕ ಹಿತದೃಷ್ಟಿಯಿಂದ ವರ್ಗಾವಣೆಯಾಗಿದ್ದಲ್ಲಿ ಲಭ್ಯವಿರುವ ಸೇರುವ ಕಾಲದ ಅವಧಿಗೆ ಮೀರದಂತೆ ರಜೆಯನ್ನು ಮಂಜೂರು ಮಾಡಬಹುದೆಂದು 1990ರ ಸರ್ಕಾರಿ ಜ್ಞಾಪನ (ಸಂಖ್ಯೆ ಎಫ್​ಡಿ 22, ಎಸ್​ಆರ್​ಎಸ್ 90) ತಿಳಿಸಿದೆ.

**RSGE**::: ಸರ್ಕಾರಿ ಕಾರ್ನರ್​

ನಾನು 3 ವರ್ಷದಿಂದ ಬಳ್ಳಾರಿ ನ್ಯಾಯಾಂಗ ಇಲಾಖೆಯಲ್ಲಿ ಬೆರಳಚ್ಚು ನಕಲುಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಈಗ ಕೆಪಿಎಸ್​ಸಿ ನಡೆಸಿದ ಪರೀಕ್ಷೆಯಲ್ಲಿ ಬೆರೆಳಚ್ಚುಗಾರ ಹುದ್ದೆಗೆ ಆಯ್ಕೆ ಆಗಿದ್ದು, ಒಂದು ವೇಳೆ ಕಾರಣಾಂತರದಿಂದ ಈ ಹುದ್ದೆ ರದ್ದುಪಡಿಸಿದರೆ ನಾನು ನ್ಯಾಯಾಂಗ ಇಲಾಖೆಗೆ ಮರಳಿ ಕರ್ತವ್ಯಕ್ಕೆ ಹಾಜರಾಗಬಹುದೇ? ಎಷ್ಟು ವರ್ಷಗಳ ಒಳಗೆ ನ್ಯಾಯಾಂಗ ಇಲಾಖೆಗೆ ಮರಳಲು ಅವಕಾಶವಿರುತ್ತದೆ?
| ಎಚ್. ಆನಂದ್ ಗಂಗಾವತಿ, ಕೊಪ್ಪಳ
ಕರ್ನಾಟಕ ಸರ್ಕಾರಿ ಸೇವಾ (ನೇರ ನೇಮಕಾತಿ) ನಿಯಮಾ ವಳಿಯ 1977ರ ನಿಯಮ 11ರ ಮೇರೆಗೆ ನೀವು ಅನುಮತಿ ಪಡೆದು ಅರ್ಜಿ ಸಲ್ಲಿಸಿ ಬೆರಳಚ್ಚುಗಾರ ಹುದ್ದೆಗೆ ಆಯ್ಕೆಯಾದರೆ ಈ ಹುದ್ದೆಯ ಆದೇಶ ಪಡೆದ ಮೇಲೆ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 252ಬಿ ರಂತೆ ಕರ್ತವ್ಯ ದಿಂದ ಬಿಡುಗಡೆ ಹೊಂದಬೇಕಾಗುತ್ತದೆ. ಹೀಗೆ ಬಿಡುಗಡೆ ಹೊಂದುವ ಮೊದಲು ನೀವು ನಿಮ್ಮನೇಮಕಾತಿ ಪ್ರಾಧಿಕಾರಕ್ಕೆ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 2ರ ಮೇರೆಗೆ ನಿಮ್ಮ ಹುದ್ದೆಯ ಹಕ್ಕನ್ನು (ಲೀನ್) 2 ವರ್ಷದ ವರೆಗೆ ಕಾಯ್ದಿರಿಸಬೇಕೆಂದು ವಿನಂತಿಸಬೇಕು. ಆಕಸ್ಮಿಕವಾಗಿ ಕೆಪಿಎಸ್​ಸಿಯ ಬೆರಳಚ್ಚುಗಾರರ ಹುದ್ದೆ ರದ್ದಾದಲ್ಲಿ 2 ವರ್ಷದ ಒಳಗೆ ನೀವು ಪುನಃ ನ್ಯಾಯಾಂಗ ಇಲಾಖೆಗೆ ಮರಳಿ ಕರ್ತವ್ಯಕ್ಕೆ ಹಾಜರಾಗಬಹುದು. ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕ ನೋಡಬಹುದು.

ಬಡ್ತಿ ಮೀಸಲು ಕಾಯ್ದೆಗೆ ತಕರಾರು,

ಎಸ್ಸಿ-ಎಸ್ಟಿ ಸರ್ಕಾರಿ ನೌಕರರ ಹಿತರಕ್ಷಣೆ ಹೆಸರಲ್ಲಿ ಸರ್ಕಾರ ಜಾರಿಗೆ ತಂದಿದ್ದ ಕಾಯ್ದೆ ನ್ಯಾಯಾಂಗದ ಅಧಿಕಾರವನ್ನು ಕಿತ್ತುಕೊಂಡಿದೆ. ಎಂ. ನಾಗರಾಜ್ ಪ್ರಕರಣಕ್ಕೆ ಸಂಬಂದಿಸಿ ಸೆ.26ರಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಬಡ್ತಿ ಮೀಸಲಾತಿಯಲ್ಲಿ ಕೆನೆಪದರ ತತ್ವ ಅಳವಡಿಸ ಬೇಕು ಎಂದು ತೀರ್ಪು ನೀಡಿದ್ದು, ಈ ಪ್ರಕರಣ ವನ್ನು ಆ ತೀರ್ಪಿನ ವ್ಯಾಪ್ತಿಯಲ್ಲೇ ನೋಡಬೇಕು ಎಂದು ಅರ್ಜಿದಾರ ಬಿ.ಕೆ. ಪವಿತ್ರ ಪರ ವಕೀಲ ರಾಜೀವ್ ಧವನ್ ವಾದ ಮಂಡಿಸಿದ್ದಾರೆ.
ಬಡ್ತಿ ಮೀಸಲಾತಿ ಹೊಂದಿರುವ ಸರ್ಕಾರಿ ನೌಕರರಿಗೆ ಜ್ಯೇಷ್ಠತೆ ವಿಸ್ತರಿಸುವ ಕುರಿತ ಸರ್ಕಾರದ ನೂತನ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ವೇಳೆ ಕೆಲ ವಿಚಾರ ಗಳನ್ನು ಮುಂದಿಟ್ಟ ವಕೀಲ ಧವನ್, ಬಡ್ತಿ ಮೀಸಲಾತಿ ನೀಡುವಾಗ ಎಸ್ಸಿ-ಎಸ್ಟಿ ಸಮುದಾಯದ ನೌಕರನ ಆಡಳಿತ ದಕ್ಷತೆ, ಹಿಂದುಳಿದಿರುವಿಕೆ, ಸಮುದಾಯಗಳಿಗೆ ಸಿಕ್ಕಿರುವ ಪ್ರಾತಿನಿಧ್ಯಗಳಂತಹ ಮಾನದಂಡಗಳನ್ನು ಅನುಸರಿಸಬೇಕು. ಇದನ್ನು 2006ರ ಎಂ. ನಾಗರಾಜ್ ತೀರ್ಪಿನಲ್ಲೂ ಹೇಳ ಲಾಗಿತ್ತು. ಕಳೆದ ತಿಂಗಳು ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠದ ತೀರ್ಪಿನಲ್ಲೂ ಪುನರುಚ್ಚರಿಸಲಾಗಿದ್ದು, ಕೆನೆಪದರ ತತ್ವ ಅಳವಡಿಸಿಕೊಳ್ಳುವ ಬಗ್ಗೆ ಒತ್ತಿ ಹೇಳಲಾಗಿದೆ ಎಂದು ನ್ಯಾಯಮೂರ್ತಿ ಉದಯ್ ಲಲಿತ್ ಮತ್ತು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ವಿಭಾಗೀಯ ಪೀಠದ ಗಮನಸೆಳೆದರು.
ಈ ಮೊದಲು ನೂತನ ಕಾಯ್ದೆ ಜಾರಿಗೆ ಕ್ರಮ ಕೈಗೊಳ್ಳದೆ ಯಥಾಸ್ಥಿತಿ ಕಾಯ್ದುಕೊಳ್ಳಲಾಗುವುದು ಎಂದಿದ್ದ ಸರ್ಕಾರ, ಕಳೆದ ವಿಚಾರಣೆ ವೇಳೆ ಮೌಖಿಕ ಭರವಸೆಯನ್ನು ಹಿಂತೆಗೆದುಕೊಳ್ಳಲಾಗುವುದು ಎಂಬ ಹೇಳಿಕೆ ನೀಡಿ ದ್ವಂದ್ವ ನೀತಿ ಅನುಸರಿಸಿತು ಎಂದು ಆರೋಪಿಸಿದ ಅವರು, ಸರ್ಕಾರಿ ನೇಮಕಾತಿಗಳಲ್ಲಿ ಮೀಸಲಾತಿ ನೀತಿ ಅಳವಡಿಸಿಕೊಳ್ಳುವುದು ತಪ್ಪೇನಲ್ಲ. ರೋಸ್ಟರ್, ಬ್ಯಾಕ್​ಲಾಗ್ ನಿಯಮ ಗಳನ್ನೂ ನಾವು ವಿರೋಧಿಸಿಲ್ಲ. ಕೆಳ ಹಂತದ ಹುದ್ದೆಗಳ ನೇರ ನೇಮಕಾತಿ ಹಾಗೂ ಕೆಳ ಹಂತದ ನೌಕರರ ನೇಮಕಾತಿಗೆ ಬಡ್ತಿ ಮೀಸಲಾತಿ ನೀತಿ ಅನುಸರಿಸಿ, ಕೆನೆಪದರದ ನಿಯಮ ಅಳವಡಿಸಿಕೊಳ್ಳುವುದಕ್ಕೆ ತಕರಾರಿಲ್ಲ ಎಂದು ವಿವರಿಸಿದರು. 3 ಗಂಟೆ ವಾದಿಸಿದ ಧವನ್, ಪ್ರಕರಣಕ್ಕೆ ಪೂರಕವಾಗಿರುವ ಹಿಂದಿನ ಅನೇಕ ತೀರ್ಪಗಳನ್ನು ಉಲ್ಲೇಖಿಸಿದರು. ಬುಧವಾರವೂ ವಾದ ಮುಂದುವರಿಸಲಿದ್ದಾರೆ. ನಂತರ ರಾಜ್ಯ ಸರ್ಕಾರ ಮತ್ತು ಎಸ್ಸಿ-ಎಸ್ಟಿ ನೌಕರರ ಪರ ವಕೀಲರು ಅವರ ವಿಚಾರಗಳನ್ನು ನ್ಯಾಯಪೀಠದ ಮುಂದೆ ಪ್ರಸ್ತುತಪಡಿಸಲಿದ್ದಾರೆ.

Wednesday, October 17, 2018

**RSGE**::: ನೌಕರರಿಗೆ ಮುಂಬಡ್ತಿ ಮರೀಚಿಕೆ,

5000 ಹುದ್ದೆಗಳಿಗೆ ಬಡ್ತಿ ಸ್ಥಗಿತ | ನಿವೃತ್ತಿ ಅಂಚಿನಲ್ಲಿರುವವರಿಗೆ ಸಂಕಟ >>
| ರುದ್ರಣ್ಣ ಹರ್ತಿಕೋಟೆ
ಬೆಂಗಳೂರು: ಬಡ್ತಿ ಮೀಸಲಾತಿ ವಿಷಯದಲ್ಲಿ ಸರ್ಕಾರ ಯಾವುದೇ ತೀರ್ವನಕ್ಕೆ ಬರಲು ಸಾಧ್ಯವಾಗದ್ದರಿಂದ ಸರ್ಕಾರಿ ನೌಕರರು ಮುಂಬಡ್ತಿ ಇಲ್ಲದೆ ನಿವೃತ್ತರಾಗುತ್ತಿರುವ ಪರಿಸ್ಥಿತಿ ನಿರ್ವಣವಾಗಿದೆ. ಅ. 23ರ ಸುಪ್ರೀಂಕೋರ್ಟ್ ತೀರ್ಪಿಗಾಗಿ ಎದುರು ನೋಡುತ್ತಿರುವ ನೌಕರರು ನಿಯಮ 32 ಜಾರಿಗೆ ಒತ್ತಾಯಿಸಿದ್ದಾರೆ. ರಾಜ್ಯದ ಎಲ್ಲ ಇಲಾಖೆಗಳಲ್ಲಿ ಸುಮಾರು 5 ಸಾವಿರ ಹುದ್ದೆಗಳ ಬಡ್ತಿ ಪ್ರಕ್ರಿಯೆ 19 ತಿಂಗಳಿನಿಂದ ಸ್ಥಗಿತವಾಗಿದ್ದು, ನೂರಾರು ನೌಕರರು ಕನಿಷ್ಠ ಒಂದು ಬಡ್ತಿಯೂ ಇಲ್ಲದೆ ವಂಚಿತರಾಗುತ್ತಿದ್ದಾರೆ.
ಬಡ್ತಿ ಮೀಸಲಾತಿ ವಿಚಾರದಲ್ಲಿ ಸುಪ್ರೀಂಕೋರ್ಟ್​ನಲ್ಲಿನ ಪ್ರಕರಣ ಮುಂದಕ್ಕೆ ಹೋಗುತ್ತಿರುವುದರಿಂದ ನಿವೃತ್ತಿ ಅಂಚಿನಲ್ಲಿನ ನೌಕರರಿಗೆ ಬಡ್ತಿ ಮರೀಚಿಕೆಯಾಗಿದೆ. ಸರ್ಕಾರಕ್ಕೆ ಸುಪ್ರೀಂಕೋರ್ಟ್ ತೀರ್ಪು ಹಾಗೂ ರಾಷ್ಟ್ರಪತಿ ಅಂಕಿತ ಹಾಕಿರುವ ಕಾನೂನು ಅತ್ತ ಧರಿ ಇತ್ತ ಪುಲಿ ಎಂಬ ವಾತಾವರಣ ಸೃಷ್ಟಿಸಿದ್ದರಿಂದ ಬಡ್ತಿ ಪ್ರಕ್ರಿಯೆ ತಡೆಹಿಡಿದಿದೆ.
ಬಡ್ತಿಗೆ ತಡೆ: ಕಳೆದ ವರ್ಷ ಪವಿತ್ರಾ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪು ಹೊರಬೀಳುತ್ತಿದ್ದಂತೆ, 2017ರ ಮಾ.22ರಂದು 6 ತಿಂಗಳ ಅವಧಿಗೆ ಸರ್ಕಾರ ಬಡ್ತಿ ಸ್ಥಗಿತಗೊಳಿಸಿತ್ತು. ಬಳಿಕ ಸೆಪ್ಟೆಂಬರ್​ನಲ್ಲಿ 15 ದಿನಗಳ ಅವಧಿಗೆ ಬಡ್ತಿಗೆ ತಡೆ ಮುಂದುವರಿಸಲಾಯಿತು. 2018ರ ಜನವರಿಯಲ್ಲಿ ಮತ್ತೆ 15 ದಿನಗಳ ಕಾಲ ಬಡ್ತಿ ನೀಡುವುದಕ್ಕೆ ತಡೆ ಅವಧಿ ವಿಸ್ತರಿಸಲಾಯಿತು. ನೌಕರರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ನ್ಯಾಯಾಲಯದ ಮುಂದೆ ಸರ್ಕಾರ ಸರಿಯಾಗಿ ಮನವರಿಕೆ ಮಾಡುತ್ತಿಲ್ಲ ಎಂಬುದು ನೌಕರರ ಕೂಗು.
ನಿವೃತ್ತಿ ಅಂಚಿನವರಿಗೆ ಸಮಸ್ಯೆ: ಪ್ರತಿ ವರ್ಷ ಸುಮಾರು 15 ಸಾವಿರ ನೌಕರರು ನಿವೃತ್ತರಾಗುತ್ತಾರೆ. ಇದರಲ್ಲಿ ಬಹುತೇಕರಿಗೆ ಒಂದು ಬಡ್ತಿಯೂ ಸಿಕ್ಕಿರುವುದಿಲ್ಲ. ಒಂದಾದರೂ ಮುಂಬಡ್ತಿ ಸಿಕ್ಕರೆ ನಿವೃತ್ತಿ ವೇತನ ಹಾಗೂ ಸೌಲಭ್ಯದಲ್ಲಿ ಒಂದಷ್ಟು ಅನುಕೂಲವಾಗುತ್ತದೆ ಎಂಬುದು ನೌಕರರ ಉದ್ದೇಶ. ಕಳೆದ ವರ್ಷ ಸಚಿವಾಲಯದಲ್ಲೇ 150 ನೌಕರರು ಬಡ್ತಿ ಇಲ್ಲದೆ ನಿವೃತ್ತರಾಗಿ ದ್ದಾರೆ. ಈ ವರ್ಷ ಏಪ್ರಿಲ್​ನಿಂದ ನಿವೃತ್ತರಾದವರಲ್ಲಿ 40ಕ್ಕೂ ಹೆಚ್ಚು ಜನ ಬಡ್ತಿ ವಂಚಿತರಿದ್ದಾರೆ. ಸರ್ಕಾರದ ಮಟ್ಟದಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚಾಗಿದೆ.
ಏಕ ಆದೇಶ?
ಬಡ್ತಿ ಪ್ರಕ್ರಿಯೆ ಸ್ಥಗಿತವಾಗಿದ್ದರೂ ಕೆಲ ಇಲಾಖೆಗಳಲ್ಲಿ ಏಕ ಆದೇಶ (ಸಿಂಗಲ್ ಆರ್ಡರ್) ಹೊರಡಿಸಿರುವ ಉದಾಹರಣೆ ಗಳಿವೆ. ಆದ್ದರಿಂದಲೇ ನೌಕರರು ನಿವೃತ್ತಿಗೆ ಮುನ್ನ ನಿಯಮ 32 ಅನ್ವಯ ಬಡ್ತಿ ನೀಡಿ ಎಂದು ಮುಖ್ಯ ಕಾರ್ಯದರ್ಶಿ ಮುಂದೆ ಬೇಡಿಕೆ ಇಟ್ಟಿದ್ದಾರೆ. ನಿವೃತ್ತಿಯ ಕೊನೇ ದಿನವೂ ಬಡ್ತಿ ಪಡೆಯಲು ಅವಕಾಶಗಳಿವೆ. ಆದ್ದರಿಂದ ನ್ಯಾಯಾಲಯದ ತೀರ್ಪು ಏನಾದರೂ ಬರಲಿ, ಮುಂಬಡ್ತಿ ಅವಕಾಶ ಒದಗಿಸಿ ಎಂದು ಕೋರಿದ್ದಾರೆ. ಆದರೆ ನ್ಯಾಯಾಲಯದ ಭಯದಲ್ಲಿರುವ ಮುಖ್ಯ ಕಾರ್ಯದರ್ಶಿ ಏನನ್ನೂ ನಿರ್ಧರಿಸುತ್ತಿಲ್ಲ. ಸುಪ್ರೀಂಕೋರ್ಟ್ ಅ.23ರಂದು ಸ್ಪಷ್ಟ ಆದೇಶ ನೀಡಬಹುದು ಎಂಬುದು ನೌಕರರ ಆಶಯ.
ಸಾಕಷ್ಟು ಬಡ್ತಿ ಹುದ್ದೆಗಳು ಖಾಲಿ ಇವೆ. ಅ.23ರಂದು ನ್ಯಾಯಾಲಯದಲ್ಲಿ ಸ್ಪಷ್ಟ ಆದೇಶ ಹೊರಬಿದ್ದರೆ ಸಮಸ್ಯೆ ಬಗೆಹರಿಯಲಿದೆ.
| ಟಿ.ಎಂ. ವಿಜಯಭಾಸ್ಕರ್, ಮುಖ್ಯ ಕಾರ್ಯದರ್ಶಿ
ಅರ್ಹರಿಗೆ ಮುಂಬಡ್ತಿಯಲ್ಲಿ ಯಾವುದೇ ಅನ್ಯಾಯ ಆಗಬಾರದು. ನಿವೃತ್ತಿ ಅಂಚಿನಲ್ಲಿರುವವರು ಬಡ್ತಿಯಿಂದ ವಂಚಿತರಾಗದಂತೆ ಸರ್ಕಾರ ಕ್ರಮ ಕೈಗೊಳ್ಳಲಿ.
| ಪಿ. ಗುರುಸ್ವಾಮಿ, ಅಧ್ಯಕ್ಷ, ಸಚಿವಾಲಯ ನೌಕರರ ಸಂಘ
ಮುಂಬಡ್ತಿಗೆ ಅರ್ಹರಾಗಿರುವ ನೌಕರರಿಗೆ ಅನ್ಯಾಯವಾಗುತ್ತಿದೆ. ಆದಷ್ಟು ಬೇಗ ನೌಕರರಿಗೆ ನ್ಯಾಯ ದೊರಕಬೇಕು.
| ಮಹದೇವಯ್ಯ ಮಠಪತಿ, ಅಧ್ಯಕ್ಷ, ಸರ್ಕಾರಿ ನೌಕರರ ಒಕ್ಕೂಟ
ರಕ್ಷಣೆ ಕಾಯ್ದೆ ಅನುಷ್ಠಾನಕ್ಕೆ ಮುಂದಾದ ರಾಜ್ಯ ಸರ್ಕಾರ
ಬೆಂಗಳೂರು: ಬಡ್ತಿ ಕಾನೂನನ್ನು ತಕ್ಷಣದಿಂದಲೇ ಅನುಷ್ಠಾನಗೊಳಿಸುವಂತೆ ಸರ್ಕಾರದ ಕಾಂಗ್ರೆಸ್ ಕಡೆಯಿಂದ ಒತ್ತಡ ಹೆಚ್ಚಾಗಿದೆ. ಸರ್ಕಾರವೂ ವಕೀಲರ ಅಭಿಪ್ರಾಯ ಪಡೆದು ಕಾನೂನು ಜಾರಿಗೆ ಮುಂದಾಗಿದೆ. ಶೇ.18:82ರ ಸೂತ್ರದಂತೆ ಬಡ್ತಿ ಹಂಚಿಕೆಗೆ ಎಸ್ಸಿ- ಎಸ್ಟಿ ಹಾಗೂ ಸಾಮಾನ್ಯ ವರ್ಗದ ಸಂಘಟನೆಗಳ ನಡುವೆ ಒಮ್ಮತ ಮೂಡುತ್ತಿರುವಾಗಲೇ, ಅ.23ರೊಳಗೆ ಕಾನೂನು ಜಾರಿಗೆ ಎಸ್ಸಿ-ಎಸ್ಟಿ ನೌಕರರ ಒಂದು ತಂಡ ಒತ್ತಡ ತರುತ್ತಿದೆ. ಹೀಗಾಗಿ ಸುಪ್ರೀಂಕೋರ್ಟ್​ನಲ್ಲಿ ರಾಜ್ಯ ಸರ್ಕಾರವನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಮುಕುಲ್ ರೋಹ್ಟಗಿ ಜತೆ ಅಧಿಕಾರಿಗಳು ರ್ಚಚಿಸಿದ್ದು, ಬಡ್ತಿ ರಕ್ಷಿಸುವ ಕಾನೂನನ್ನು ಸುಪ್ರೀಂಕೋರ್ಟ್ ಸೂಚನೆ ಪಕ್ಕಕ್ಕಿಟ್ಟು ಜಾರಿ ಮಾಡುವ ಬಗ್ಗೆ ಚಿಂತಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಸಿಎಂ ಸೂಚನೆ ಮೇರೆಗೆ ಸಿಎಸ್ ಮತ್ತು ಇತರ ಉನ್ನತ ಅಧಿಕಾರಿಗಳು ಸಭೆ ನಡೆಸಿದ್ದು, ಮುಂದಾಗುವ ಸವಾಲಿನ ಬಗ್ಗೆ ರ್ಚಚಿಸಿದ್ದಾರೆಂದು ತಿಳಿದುಬಂದಿದೆ. ಹೊಸ ಕಾನೂನು ಜಾರಿಮಾಡಿ, ಮುಂದಿನದನ್ನು ನಾವು ನೊಡಿಕೊಳ್ಳುತ್ತೇವೆ ಎಂದು ಸರ್ಕಾರವನ್ನು ಪ್ರತಿನಿಧಿಸುವ ದೆಹಲಿಯ ಹಿರಿಯ ವಕೀಲರು ಅಭಿಪ್ರಾಯ ನೀಡಿದ್ದು, ಲಿಖಿತ ಅಭಿಪ್ರಾಯ ಕೊಡುವುದಕ್ಕೂ ಮುಂದಾಗಿದ್ದಾರೆನ್ನಲಾಗಿದೆ. ಕಾಯ್ದೆ ಅನುಷ್ಠಾನಕ್ಕೆ ಅಭಿಪ್ರಾಯಪಡೆದುಕೊಳ್ಳಲು ರಾಜ್ಯ ಸರ್ಕಾರದ ಕಾನೂನು ಪ್ರತಿನಿಧಿಗಳು ದೆಹಲಿ ವಕೀಲರಿಗೆ ಪತ್ರ ಬರೆದಿದ್ದು, ಅಲ್ಲಿಂದ ಪತ್ರ ಬರುತ್ತಿದ್ದಂತೆ ಕಾನೂನು ಜಾರಿ ಮಾಡಲು ನಿರ್ಧರಿಸಲಾಗಿದೆ.
ಆಯೋಗಕ್ಕೂ ದೂರು
ಉಪ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರು ವುದರಿಂದ ಈ ಕಾನೂನು ಜಾರಿಗೆ ಅವಕಾಶ ಮಾಡಿಕೊಡದಂತೆ ಚುನಾವಣೆ ಆಯೋಗ, ಸಿಎಂ ಮತ್ತು ಸರ್ಕಾರದ ಮುಖ್ಯಕಾರ್ಯದರ್ಶಿ ಅವರಿಗೆ ಅಹಿಂಸಾ ಸಂಘಟನೆ ಮನವಿ ಸಲ್ಲಿಸಿದೆ. ಕಾನೂನು ಜಾರಿ ಮಾಡಿದರೆ ತಕ್ಷಣ ಹೋರಾಟಕ್ಕಿಳಿಯುವ ಎಚ್ಚರಿಕೆಯನ್ನೂ ನೀಡಿದೆ.
ಅನುಷ್ಠಾನವೂ ಸುಲಭವಲ್ಲ
ಒಂದು ವೇಳೆ ಸರ್ಕಾರ ಹೊಸ ಕಾನೂನು ಜಾರಿ ಮಾಡಿದರೆ 2017ರ ಫೆ.9ರ ನಂತರ ಹೊರಡಿಸಿದ ಹಿಂಬಡ್ತಿ- ಮುಂಬಡ್ತಿ ಆದೇಶವೆಲ್ಲ,  ರದ್ದಾಗುತ್ತದೆ. ಅಲ್ಲದೆ ಹೊಸದಾಗಿ ಎಲ್ಲ ಇಲಾಖೆಯ ಜ್ಯೇಷ್ಠತಾ ಪಟ್ಟಿ ಮಾಡಿ, ಆಕ್ಷೇಪಣೆ ಕರೆದು ಮುಂಬಡ್ತಿ ನೀಡಬೇಕಾಗುತ್ತದೆ. ಈ ಪ್ರಕ್ರಿಯೆ ತಕ್ಷಣಕ್ಕೆ ಮುಗಿಯುವ ಕೆಲಸವೂ ಅಲ್ಲ.

Friday, October 12, 2018

**RSGE**::: ಪ್ರಾಂಶುಪಾಲರ ವಿರುದ್ಧ ಕ್ರಮಕ್ಕೆ ಸರ್ಕಾರ ಆದೇಶ

ಹುಬ್ಬಳ್ಳಿ ಆರ್ಯುವೇದ ಮಹಾವಿದ್ಯಾಲಯದಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಬೋಧಕ, ಬೋಧಕೇತರ ಹುದ್ದೆಗಳ ಭರ್ತಿ ಸಂದರ್ಭ ಮೀಸಲಾತಿ ನಿಯಮಗಳನ್ನು ಗಾಳಿಗೆ ತೂರಿರುವವರ ವಿರುದ್ಧ ಕೂಡಲೇ ಕ್ರಿಮಿನಲ್ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಸರ್ಕಾರ ಆದೇಶಿಸಿದೆ.
ನೇರ ನೇಮಕಾತಿ ಮತ್ತು ಮುಂಬಡ್ತಿ ಮೂಲಕ ಖಾಲಿ ಹುದ್ದೆ ಭರ್ತಿ ಮಾಡುವಾಗ ಮೀಸಲಾತಿ ನಿಯಮ ಉಲ್ಲಂಘಿಸಿರುವ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಆಯುಕ್ತರು ತನಿಖೆ ನಡೆಸಿ ನೀಡಿರುವ ವರದಿ ಹಿನ್ನೆಲೆಯಲ್ಲಿ ಸಂಸ್ಥೆಯ ಪ್ರಾಂಶುಪಾಲ ಮತ್ತು ಕಾರ್ಯದರ್ಶಿ ವಿರುದ್ದ ಎಸ್ಸಿ-ಎಸ್ಟಿ, ಹಿಂದುಳಿದ ವರ್ಗಗಳ ನಿಯಮ 2000ರ ನಿಯಮಗಳ ಕಲಂ 5ರ ಪ್ರಕಾರ ಕ್ರಮ ಜರುಗಿಸುವಂತೆ ಆದೇಶದಲ್ಲಿ (ಸಂಖ್ಯೆ: ಸಕಿ 37 ಎಸ್ಟಿಸಿ 2018) ತಿಳಿಸಲಾಗಿದೆ. ಅಲ್ಲದೆ, ಸದರಿ ಸಂಸ್ಥೆಗೆ ನೀಡಲಾಗುತ್ತಿರುವ ಅನುದಾನ ತಡೆ ಹಿಡಿಯಬೇಕು ಎಂದು ಆದೇಶಿಸಲಾಗಿದೆ.
1986ನೇ ಸಾಲಿನಿಂದ ಈ ತನಕವೂ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡುವಾಗ ಮೀಸಲಾತಿ ನಿಯಮ ಉಲ್ಲಂಘನೆಯಾಗಿರುವ ಬಗ್ಗೆ ಹಿರಿಯ ಪತ್ರಕರ್ತ ಭೋಜಶೆಟ್ಟರ ಸರ್ಕಾರಕ್ಕೆ ದೂರು ಸಲ್ಲಿಸಿ ಗಮನ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿ, ಕ್ರಿಮಿನಲ್ ಪ್ರಕರಣ ದಾಖಲು ಮಾಡಲು ಆದೇಶಿಸಲಾಗಿತ್ತು.
ಪ್ರಕರಣ ಮುಚ್ಚಿಹಾಕಲು ಪ್ರಯತ್ನ
ಮೀಸಲು ನಿಯಮ ಉಲ್ಲಂಘನೆ ಗಂಭೀರ ಪ್ರಕರಣ ವಾಗಿದ್ದರೂ ರಾಜಕೀಯ ಪ್ರಭಾವ ಬಳಸಿ ಪ್ರಕರಣ ಮುಚ್ಚಿ ಹಾಕುವ ಮೂಲಕ ಸಂಸ್ಥೆ ಪ್ರಾಂಶುಪಾಲ, ಕಾರ್ಯದರ್ಶಿ ರಕ್ಷಣೆಗೆ ತೆರೆಮರೆ ಪ್ರಯತ್ನ ನಡೆಯುತ್ತಿದೆ ಎಂದು ಭೋಜಶೆಟ್ಟರ ದೂರಿದ್ದಾರೆ. ಕೆಲ ಪಟ್ಟಭದ್ರರ ಹಿತಾಸಕ್ತಿಗೆ ಮಣಿದು ಕ್ರಿಮಿನಲ್ ಪ್ರಕರಣ ದಾಖಲು ಮಾಡದೆ ಮೀನಮೇಷ ಎಣಿಸುತ್ತಿರುವ ಸರ್ಕಾರ, ಈಗಲಾದರೂ ಕ್ರಮ ಕೈಗೊಳ್ಳಬೇಕು.  ಇಲ್ಲದಿದ್ದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಕೆ ನೀಡಿದ್ದಾರೆ.
ಮುಂಬಡ್ತಿ ರಕ್ಷಿಸುವ ಕಾಯ್ದೆ ಜಾರಿ ಮಾಡುವುದಾಗಿ ಸರ್ಕಾರದ ವತಿಯಿಂದ ಸಲ್ಲಿಸುವ ಅಫಿಡವಿಟ್​ಗೆ ಸಿಎಂ ಗುರುವಾರ ಸಹಿ ಮಾಡಿ ಕಳಿಸಿಕೊಟ್ಟಿದ್ದರು. ನ್ಯಾಯಾಲಯದಲ್ಲಿ ಯಾವ ತೀರ್ಮಾನ ಆಗುತ್ತದೆ ಎಂದು ನೋಡಿ ಮುಂದಿನ ಚರ್ಚೆ ಮಾಡಲಾಗುತ್ತದೆ.
| ಪ್ರಿಯಾಂಕ್ ಖರ್ಗೆ ಸಮಾಜ ಕಲ್ಯಾಣ ಸಚಿವ
ಮುಂಬಡ್ತಿ ಕುರಿತು ನ್ಯಾಯಾಲಯ ವಿಚಾರಣೆ ಮುಂದೂಡಿದೆ. ಈ ಬಗ್ಗೆ ನಮ್ಮ ಕಾನೂನು ಇಲಾಖೆ ಪರಾಮರ್ಶೆ ನಡೆಸಿ ನಿರ್ಧಾರ ಕೈಗೊಳ್ಳಲಿದೆ.
| ಎಚ್.ಡಿ. ಕುಮಾರಸ್ವಾಮಿ ಸಿಎಂ

**RSGE**::: ಬಡ್ತಿ ಮೀಸಲು ಮತ್ತೆ ಯಥಾಸ್ಥಿತಿ,

ಬಡ್ತಿ ಮೀಸಲಿಗೆ ಸಂಬಂಧಿಸಿ ಯಥಾಸ್ಥಿತಿ ಕಾಯ್ದು ಕೊಳ್ಳುವುದು ರಾಜ್ಯ ಸರ್ಕಾರಕ್ಕೆ ಅನಿವಾರ್ಯವಾಗಿದೆ. ಎಸ್ಸಿ, ಎಸ್ಟಿ ನೌಕರರ ಹಿತ ಕಾಯುವ ಹಾಗೂ ಬಡ್ತಿ ಮೀಸಲಾತಿ ಮುಂದುವರಿಕೆಗೆ ಅವಕಾಶ ನೀಡುವ ತಿದ್ದುಪಡಿ ಕಾಯ್ದೆ ಜಾರಿ ಅನಿವಾರ್ಯವೆಂಬ ರಾಜ್ಯದ ವಾದಕ್ಕೆ ಸುಪ್ರೀಂ ಕೋರ್ಟ್ ಸೊಪು್ಪಹಾಕಿಲ್ಲ.
‘ಪ್ರಕರಣದ ಸೂಕ್ಷ್ಮತೆ ಹಾಗೂ ಜರೂರತ್ತನ್ನು ಪರಿಗಣಿಸಿ ಆದ್ಯತೆ ಮೇರೆಗೆ ಅಕ್ಟೋಬರ್ 23ರಿಂದ ಸಮಗ್ರ ವಿಚಾರಣೆ ನಡೆಸಲಿದ್ದೇವೆ’ ಎಂದು ನ್ಯಾಯಮೂರ್ತಿ ಉದಯ್ ಲಲಿತ್ ನೇತೃತ್ವದ ದ್ವಿಸದಸ್ಯ ನ್ಯಾಯಪೀಠ ತಿಳಿಸಿದೆ.
ಸದ್ಯಕ್ಕೇನೂ ಹೇಳಲ್ಲ: ಕಾಯ್ದೆ ಮುಂದುವರಿಕೆಗೆ ಅವಕಾಶ ನೀಡದಿದ್ದರೆ ಸಾವಿರಾರು ಎಸ್ಸಿ, ಎಸ್ಟಿ ನೌಕರರ ಸ್ಥಿತಿ ಡೋಲಾಯಮಾನವಾಗಲಿದೆ. ಅಂತಿಮ ತೀರ್ಪು ಬರುವ ತನಕ ಅವಕಾಶ ಕೊಡಿ ಎಂದು ಎಸ್ಸಿ, ಎಸ್ಟಿ ನೌಕರರ ಪರ ವಕೀಲೆ ಇಂದಿರಾ ಜೈಸಿಂಗ್ ವಾದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಲಲಿತ್, ಸದ್ಯಕ್ಕೆ ನಾವು ಏನೂ ಹೇಳುವುದಿಲ್ಲ. ವಿಚಾರಣೆ ಹಂತದಲ್ಲಿ ಎಲ್ಲರ ವಾದಗಳನ್ನೂ ಆಲಿಸಲಿದ್ದೇವೆ ಎಂದು ತಿಳಿಸಿದರು.
ರಾಜ್ಯದ ಪರ ವಾದಿಸಿದ ಮುಕುಲ್ ರೋಹಟ್ಗಿ, ಕೋರ್ಟ್ ತೀರ್ಪಿನ ತನಕ ಯಥಾಸ್ಥಿತಿ ಕಾಯ್ದುಕೊಳ್ಳುವುದಾಗಿ ಅಡ್ವೊಕೇಟ್ ಜನರಲ್ ತಿಳಿಸಿದ್ದರು. ಆದರೆ, ರಾಜ್ಯದಲ್ಲಿ ಕಾಯ್ದೆಯ ಅನುಷ್ಠಾನ ಆಗದಿರುವುದರಿಂದ ಸಮಸ್ಯೆಯಾಗಿದೆ. ಇದನ್ನು ಜಾರಿ ಮಾಡಲೇ ಬೇಕಾದ ಪರಿಸ್ಥಿತಿ ಇದೆ ಎಂದರು. ಇದಕ್ಕೆ ದನಿಗೂಡಿಸಿದ ಇಂದಿರಾ ಜೈಸಿಂಗ್, ಕಾಯ್ದೆಯನ್ನು ಜಾರಿಗೊಳಿಸಿ ಸೂಪರ್ ನ್ಯೂಮರಿ ಹುದ್ದೆಗಳನ್ನು ಸೃಷ್ಟಿಸುವಂತಹ ಅವಕಾಶ ಕಾನೂನಿನಲ್ಲಿದೆ ಎಂದರು.
ಅರ್ತಾಕ ವಾದ: ಎರಡೂ ವಾದಗಳಿಗೆ ಆಕ್ಷೇಪ ತೆಗೆದ ಬಿ.ಕೆ. ಪವಿತ್ರಾ ಪರ ವಕೀಲ ರಾಜೀವ್ ಧವನ್, ಸುಪ್ರೀಂಕೋರ್ಟ್ ತೀರ್ಪಗಳನ್ನು ಬದಿಗೊತ್ತಲೆಂದೇ ಸರ್ಕಾರಗಳು ಕಾಯ್ದೆಗಳನ್ನು ಜಾರಿಗೆ ತರುತ್ತಿರುವುದೇ ತಪ್ಪು. ಅದಲ್ಲದೆ, ಅಂತಿಮ ತೀರ್ಪು ಬರುವ ತನಕ ಮುಂಬಡ್ತಿಗೆ ಅವಕಾಶ ನೀಡಬೇಕು ಎಂದು ವಾದಿಸುವುದೇ ಅರ್ತಾಕ. ಕೆಲ ದಿನಗಳ ಹಿಂದೆ ಸುಪ್ರೀಂಕೋರ್ಟ್​ನ ಸಾಂವಿಧಾನಿಕ ಪೀಠ ಮುಂಬಡ್ತಿ ವೇಳೆ ಕೆನೆ ಪದರ ತತ್ವ ಅಳವಡಿಸಬೇಕು ಎಂದೂ ತೀರ್ಪು ನೀಡಿರುವುದರಿಂದ ಆ ಹಿನ್ನೆಲೆಯಲ್ಲಿಯೂ ನಾವು ಸದರಿ ಪ್ರಕರಣವನ್ನು ನೋಡಬೇಕಾಗುತ್ತದೆ ಎಂದು ವಿವರಿಸಿದರು. ಇದೇ ವೇಳೆ, ಸುಪ್ರೀಂಕೋರ್ಟ್ ತೀರ್ಪಿನ ಉಲ್ಲಂಘನೆ ಮಾಡಿದೆ ಎಂದು ಸರ್ಕಾರದ ವಿರುದ್ಧ ಸಲ್ಲಿಸಲಾಗಿದ್ದ ನ್ಯಾಯಾಂಗ ನಿಂದನೆ ಅರ್ಜಿ ಇತ್ಯರ್ಥಗೊಂಡಿರುವ ಬಗ್ಗೆ ಸರ್ಕಾರದ ವಕೀಲ ಬಸವ ಪ್ರಭು ಪಾಟೀಲ್ ಸ್ಪಷ್ಟಪಡಿಸಿದರು.
ಬಾತ್​ರೂಂ ಹಾಡಿನ ವೃತ್ತಾಂತ
ಬಡ್ತಿ ಮೀಸಲಾತಿ ವಿರೋಧಿಸಿ ವಕೀಲ ರಾಜೀವ್ ಧವನ್ ವಾದಿಸುತ್ತಿದ್ದಾಗ ಪ್ರತಿವಾದಿ ಪರ ವಕೀಲೆ ಇಂದಿರಾ ಜೈಸಿಂಗ್ ಪದೇಪದೆ ಹಸ್ತಕ್ಷೇಪ ಮಾಡುತ್ತಿದ್ದುದು ಭಾರಿ ವಾಗ್ವಾದಕ್ಕೆ ಕಾರಣವಾಯಿತು. ‘ದಯವಿಟ್ಟು ನನಗೆ ಮಾತನಾಡಲು ಬಿಡುತ್ತೀರಾ? ಮಧ್ಯದಲ್ಲಿ ಬಾಯಿ ಹಾಕಿ ಏಕೆ ಹೀಗೆ ತೊಂದರೆ ಕೊಡುತ್ತೀರಿ? ಎಂದು ಧವನ್ ಸಿಡಿಮಿಡಿಗೊಂಡದ್ದಕ್ಕೆ ಪ್ರತಿಕ್ರಿಯಿಸಿದ ಜೈಸಿಂಗ್, ‘ಈ ರೀತಿ ವಾದ ಮಾಡುವುದನ್ನು ಹಿರಿಯರಾದ ನಿಮ್ಮಿಂದಲೇ ನಾನು ಕಲಿತೆ, ನೀವೇ ನನ್ನ ಗುರು’ ಎಂದು ಕಾಲೆಳೆದರು. ‘ನಾನು ನಿಮ್ಮ ಗುರುವಾಗಲು ಸಾಧ್ಯವೇ ಇಲ್ಲ. ನೀವು ಬಂದಾಗ ನಾನು ಈ ಕೋರ್ಟ್​ನಲ್ಲೇ ಇರಲಿಲ್ಲ’ ಎಂದು ವಾದ ಮುಂದುವರಿಸಿದರು. ಸುಪ್ರೀಂ ಕೋರ್ಟ್ ತೀರ್ಪಿಗೆ ಮಾನ್ಯತೆ ನೀಡದ ಸರ್ಕಾರದ ನಡೆ ಖಂಡನೀಯ. ನಾನಿದನ್ನು ಹಾಡಿನ ಮೂಲಕ ವಿವರಿಸಬಲ್ಲೆ. ಆದರೆ,
ಕೋರ್ಟ್​ನಲ್ಲಿ ಹಾಡುವುದು ಸರಿಯಲ್ಲ ಎಂದು ಧವನ್ ಹಾಸ್ಯಚಟಾಕಿ ಹಾರಿಸಿದರು. ಆಗ ಮತ್ತೋರ್ವ ವಕೀಲ ದಿನೇಶ್ ದ್ವಿವೇದಿ, ‘ನಿಮ್ಮ ಹಾಡನ್ನು ಕೇಳಬೇಕಿದೆ, ದಯವಿಟ್ಟು ಹಾಡಿ’ ಎಂದಿದ್ದಕ್ಕೆ, ‘ನಾನು ಹಾಡುವುದನ್ನು ಕೇಳಬೇಕೆಂದರೆ ನನ್ನ ಬಾತ್​ರೂಂ ಹೊರಗಡೆ ಬಂದು ನಿಲ್ಲಿ’ ಎಂದು ಧವನ್ ಹೇಳಿಬಿಟ್ಟರು. ಸಿಡಿಮಿಡಿಗೊಂಡ ಜೈಸಿಂಗ್, ‘ಅಲ್ಲಿಗೆ ಬಂದು ಹಾಡು ಕೇಳುವ ಅಗತ್ಯ ನನಗಂತೂ ಇಲ್ಲ’ ಎಂದರು. ಇದಕ್ಕೆ ಪ್ರತಿಕ್ರಿಯಿಸದ ನ್ಯಾಯಮೂರ್ತಿಗಳು, ಅ.23ಕ್ಕೆ ಸಿಗೋಣ ಎಂದು ಭೋಜನಕ್ಕೆ ತೆರಳಿದರು.

ಹೆಚ್ಚು ಓದಿದವು