Wednesday, October 17, 2018

**RSGE**::: ನೌಕರರಿಗೆ ಮುಂಬಡ್ತಿ ಮರೀಚಿಕೆ,

5000 ಹುದ್ದೆಗಳಿಗೆ ಬಡ್ತಿ ಸ್ಥಗಿತ | ನಿವೃತ್ತಿ ಅಂಚಿನಲ್ಲಿರುವವರಿಗೆ ಸಂಕಟ >>
| ರುದ್ರಣ್ಣ ಹರ್ತಿಕೋಟೆ
ಬೆಂಗಳೂರು: ಬಡ್ತಿ ಮೀಸಲಾತಿ ವಿಷಯದಲ್ಲಿ ಸರ್ಕಾರ ಯಾವುದೇ ತೀರ್ವನಕ್ಕೆ ಬರಲು ಸಾಧ್ಯವಾಗದ್ದರಿಂದ ಸರ್ಕಾರಿ ನೌಕರರು ಮುಂಬಡ್ತಿ ಇಲ್ಲದೆ ನಿವೃತ್ತರಾಗುತ್ತಿರುವ ಪರಿಸ್ಥಿತಿ ನಿರ್ವಣವಾಗಿದೆ. ಅ. 23ರ ಸುಪ್ರೀಂಕೋರ್ಟ್ ತೀರ್ಪಿಗಾಗಿ ಎದುರು ನೋಡುತ್ತಿರುವ ನೌಕರರು ನಿಯಮ 32 ಜಾರಿಗೆ ಒತ್ತಾಯಿಸಿದ್ದಾರೆ. ರಾಜ್ಯದ ಎಲ್ಲ ಇಲಾಖೆಗಳಲ್ಲಿ ಸುಮಾರು 5 ಸಾವಿರ ಹುದ್ದೆಗಳ ಬಡ್ತಿ ಪ್ರಕ್ರಿಯೆ 19 ತಿಂಗಳಿನಿಂದ ಸ್ಥಗಿತವಾಗಿದ್ದು, ನೂರಾರು ನೌಕರರು ಕನಿಷ್ಠ ಒಂದು ಬಡ್ತಿಯೂ ಇಲ್ಲದೆ ವಂಚಿತರಾಗುತ್ತಿದ್ದಾರೆ.
ಬಡ್ತಿ ಮೀಸಲಾತಿ ವಿಚಾರದಲ್ಲಿ ಸುಪ್ರೀಂಕೋರ್ಟ್​ನಲ್ಲಿನ ಪ್ರಕರಣ ಮುಂದಕ್ಕೆ ಹೋಗುತ್ತಿರುವುದರಿಂದ ನಿವೃತ್ತಿ ಅಂಚಿನಲ್ಲಿನ ನೌಕರರಿಗೆ ಬಡ್ತಿ ಮರೀಚಿಕೆಯಾಗಿದೆ. ಸರ್ಕಾರಕ್ಕೆ ಸುಪ್ರೀಂಕೋರ್ಟ್ ತೀರ್ಪು ಹಾಗೂ ರಾಷ್ಟ್ರಪತಿ ಅಂಕಿತ ಹಾಕಿರುವ ಕಾನೂನು ಅತ್ತ ಧರಿ ಇತ್ತ ಪುಲಿ ಎಂಬ ವಾತಾವರಣ ಸೃಷ್ಟಿಸಿದ್ದರಿಂದ ಬಡ್ತಿ ಪ್ರಕ್ರಿಯೆ ತಡೆಹಿಡಿದಿದೆ.
ಬಡ್ತಿಗೆ ತಡೆ: ಕಳೆದ ವರ್ಷ ಪವಿತ್ರಾ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪು ಹೊರಬೀಳುತ್ತಿದ್ದಂತೆ, 2017ರ ಮಾ.22ರಂದು 6 ತಿಂಗಳ ಅವಧಿಗೆ ಸರ್ಕಾರ ಬಡ್ತಿ ಸ್ಥಗಿತಗೊಳಿಸಿತ್ತು. ಬಳಿಕ ಸೆಪ್ಟೆಂಬರ್​ನಲ್ಲಿ 15 ದಿನಗಳ ಅವಧಿಗೆ ಬಡ್ತಿಗೆ ತಡೆ ಮುಂದುವರಿಸಲಾಯಿತು. 2018ರ ಜನವರಿಯಲ್ಲಿ ಮತ್ತೆ 15 ದಿನಗಳ ಕಾಲ ಬಡ್ತಿ ನೀಡುವುದಕ್ಕೆ ತಡೆ ಅವಧಿ ವಿಸ್ತರಿಸಲಾಯಿತು. ನೌಕರರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ನ್ಯಾಯಾಲಯದ ಮುಂದೆ ಸರ್ಕಾರ ಸರಿಯಾಗಿ ಮನವರಿಕೆ ಮಾಡುತ್ತಿಲ್ಲ ಎಂಬುದು ನೌಕರರ ಕೂಗು.
ನಿವೃತ್ತಿ ಅಂಚಿನವರಿಗೆ ಸಮಸ್ಯೆ: ಪ್ರತಿ ವರ್ಷ ಸುಮಾರು 15 ಸಾವಿರ ನೌಕರರು ನಿವೃತ್ತರಾಗುತ್ತಾರೆ. ಇದರಲ್ಲಿ ಬಹುತೇಕರಿಗೆ ಒಂದು ಬಡ್ತಿಯೂ ಸಿಕ್ಕಿರುವುದಿಲ್ಲ. ಒಂದಾದರೂ ಮುಂಬಡ್ತಿ ಸಿಕ್ಕರೆ ನಿವೃತ್ತಿ ವೇತನ ಹಾಗೂ ಸೌಲಭ್ಯದಲ್ಲಿ ಒಂದಷ್ಟು ಅನುಕೂಲವಾಗುತ್ತದೆ ಎಂಬುದು ನೌಕರರ ಉದ್ದೇಶ. ಕಳೆದ ವರ್ಷ ಸಚಿವಾಲಯದಲ್ಲೇ 150 ನೌಕರರು ಬಡ್ತಿ ಇಲ್ಲದೆ ನಿವೃತ್ತರಾಗಿ ದ್ದಾರೆ. ಈ ವರ್ಷ ಏಪ್ರಿಲ್​ನಿಂದ ನಿವೃತ್ತರಾದವರಲ್ಲಿ 40ಕ್ಕೂ ಹೆಚ್ಚು ಜನ ಬಡ್ತಿ ವಂಚಿತರಿದ್ದಾರೆ. ಸರ್ಕಾರದ ಮಟ್ಟದಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚಾಗಿದೆ.
ಏಕ ಆದೇಶ?
ಬಡ್ತಿ ಪ್ರಕ್ರಿಯೆ ಸ್ಥಗಿತವಾಗಿದ್ದರೂ ಕೆಲ ಇಲಾಖೆಗಳಲ್ಲಿ ಏಕ ಆದೇಶ (ಸಿಂಗಲ್ ಆರ್ಡರ್) ಹೊರಡಿಸಿರುವ ಉದಾಹರಣೆ ಗಳಿವೆ. ಆದ್ದರಿಂದಲೇ ನೌಕರರು ನಿವೃತ್ತಿಗೆ ಮುನ್ನ ನಿಯಮ 32 ಅನ್ವಯ ಬಡ್ತಿ ನೀಡಿ ಎಂದು ಮುಖ್ಯ ಕಾರ್ಯದರ್ಶಿ ಮುಂದೆ ಬೇಡಿಕೆ ಇಟ್ಟಿದ್ದಾರೆ. ನಿವೃತ್ತಿಯ ಕೊನೇ ದಿನವೂ ಬಡ್ತಿ ಪಡೆಯಲು ಅವಕಾಶಗಳಿವೆ. ಆದ್ದರಿಂದ ನ್ಯಾಯಾಲಯದ ತೀರ್ಪು ಏನಾದರೂ ಬರಲಿ, ಮುಂಬಡ್ತಿ ಅವಕಾಶ ಒದಗಿಸಿ ಎಂದು ಕೋರಿದ್ದಾರೆ. ಆದರೆ ನ್ಯಾಯಾಲಯದ ಭಯದಲ್ಲಿರುವ ಮುಖ್ಯ ಕಾರ್ಯದರ್ಶಿ ಏನನ್ನೂ ನಿರ್ಧರಿಸುತ್ತಿಲ್ಲ. ಸುಪ್ರೀಂಕೋರ್ಟ್ ಅ.23ರಂದು ಸ್ಪಷ್ಟ ಆದೇಶ ನೀಡಬಹುದು ಎಂಬುದು ನೌಕರರ ಆಶಯ.
ಸಾಕಷ್ಟು ಬಡ್ತಿ ಹುದ್ದೆಗಳು ಖಾಲಿ ಇವೆ. ಅ.23ರಂದು ನ್ಯಾಯಾಲಯದಲ್ಲಿ ಸ್ಪಷ್ಟ ಆದೇಶ ಹೊರಬಿದ್ದರೆ ಸಮಸ್ಯೆ ಬಗೆಹರಿಯಲಿದೆ.
| ಟಿ.ಎಂ. ವಿಜಯಭಾಸ್ಕರ್, ಮುಖ್ಯ ಕಾರ್ಯದರ್ಶಿ
ಅರ್ಹರಿಗೆ ಮುಂಬಡ್ತಿಯಲ್ಲಿ ಯಾವುದೇ ಅನ್ಯಾಯ ಆಗಬಾರದು. ನಿವೃತ್ತಿ ಅಂಚಿನಲ್ಲಿರುವವರು ಬಡ್ತಿಯಿಂದ ವಂಚಿತರಾಗದಂತೆ ಸರ್ಕಾರ ಕ್ರಮ ಕೈಗೊಳ್ಳಲಿ.
| ಪಿ. ಗುರುಸ್ವಾಮಿ, ಅಧ್ಯಕ್ಷ, ಸಚಿವಾಲಯ ನೌಕರರ ಸಂಘ
ಮುಂಬಡ್ತಿಗೆ ಅರ್ಹರಾಗಿರುವ ನೌಕರರಿಗೆ ಅನ್ಯಾಯವಾಗುತ್ತಿದೆ. ಆದಷ್ಟು ಬೇಗ ನೌಕರರಿಗೆ ನ್ಯಾಯ ದೊರಕಬೇಕು.
| ಮಹದೇವಯ್ಯ ಮಠಪತಿ, ಅಧ್ಯಕ್ಷ, ಸರ್ಕಾರಿ ನೌಕರರ ಒಕ್ಕೂಟ
ರಕ್ಷಣೆ ಕಾಯ್ದೆ ಅನುಷ್ಠಾನಕ್ಕೆ ಮುಂದಾದ ರಾಜ್ಯ ಸರ್ಕಾರ
ಬೆಂಗಳೂರು: ಬಡ್ತಿ ಕಾನೂನನ್ನು ತಕ್ಷಣದಿಂದಲೇ ಅನುಷ್ಠಾನಗೊಳಿಸುವಂತೆ ಸರ್ಕಾರದ ಕಾಂಗ್ರೆಸ್ ಕಡೆಯಿಂದ ಒತ್ತಡ ಹೆಚ್ಚಾಗಿದೆ. ಸರ್ಕಾರವೂ ವಕೀಲರ ಅಭಿಪ್ರಾಯ ಪಡೆದು ಕಾನೂನು ಜಾರಿಗೆ ಮುಂದಾಗಿದೆ. ಶೇ.18:82ರ ಸೂತ್ರದಂತೆ ಬಡ್ತಿ ಹಂಚಿಕೆಗೆ ಎಸ್ಸಿ- ಎಸ್ಟಿ ಹಾಗೂ ಸಾಮಾನ್ಯ ವರ್ಗದ ಸಂಘಟನೆಗಳ ನಡುವೆ ಒಮ್ಮತ ಮೂಡುತ್ತಿರುವಾಗಲೇ, ಅ.23ರೊಳಗೆ ಕಾನೂನು ಜಾರಿಗೆ ಎಸ್ಸಿ-ಎಸ್ಟಿ ನೌಕರರ ಒಂದು ತಂಡ ಒತ್ತಡ ತರುತ್ತಿದೆ. ಹೀಗಾಗಿ ಸುಪ್ರೀಂಕೋರ್ಟ್​ನಲ್ಲಿ ರಾಜ್ಯ ಸರ್ಕಾರವನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಮುಕುಲ್ ರೋಹ್ಟಗಿ ಜತೆ ಅಧಿಕಾರಿಗಳು ರ್ಚಚಿಸಿದ್ದು, ಬಡ್ತಿ ರಕ್ಷಿಸುವ ಕಾನೂನನ್ನು ಸುಪ್ರೀಂಕೋರ್ಟ್ ಸೂಚನೆ ಪಕ್ಕಕ್ಕಿಟ್ಟು ಜಾರಿ ಮಾಡುವ ಬಗ್ಗೆ ಚಿಂತಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಸಿಎಂ ಸೂಚನೆ ಮೇರೆಗೆ ಸಿಎಸ್ ಮತ್ತು ಇತರ ಉನ್ನತ ಅಧಿಕಾರಿಗಳು ಸಭೆ ನಡೆಸಿದ್ದು, ಮುಂದಾಗುವ ಸವಾಲಿನ ಬಗ್ಗೆ ರ್ಚಚಿಸಿದ್ದಾರೆಂದು ತಿಳಿದುಬಂದಿದೆ. ಹೊಸ ಕಾನೂನು ಜಾರಿಮಾಡಿ, ಮುಂದಿನದನ್ನು ನಾವು ನೊಡಿಕೊಳ್ಳುತ್ತೇವೆ ಎಂದು ಸರ್ಕಾರವನ್ನು ಪ್ರತಿನಿಧಿಸುವ ದೆಹಲಿಯ ಹಿರಿಯ ವಕೀಲರು ಅಭಿಪ್ರಾಯ ನೀಡಿದ್ದು, ಲಿಖಿತ ಅಭಿಪ್ರಾಯ ಕೊಡುವುದಕ್ಕೂ ಮುಂದಾಗಿದ್ದಾರೆನ್ನಲಾಗಿದೆ. ಕಾಯ್ದೆ ಅನುಷ್ಠಾನಕ್ಕೆ ಅಭಿಪ್ರಾಯಪಡೆದುಕೊಳ್ಳಲು ರಾಜ್ಯ ಸರ್ಕಾರದ ಕಾನೂನು ಪ್ರತಿನಿಧಿಗಳು ದೆಹಲಿ ವಕೀಲರಿಗೆ ಪತ್ರ ಬರೆದಿದ್ದು, ಅಲ್ಲಿಂದ ಪತ್ರ ಬರುತ್ತಿದ್ದಂತೆ ಕಾನೂನು ಜಾರಿ ಮಾಡಲು ನಿರ್ಧರಿಸಲಾಗಿದೆ.
ಆಯೋಗಕ್ಕೂ ದೂರು
ಉಪ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರು ವುದರಿಂದ ಈ ಕಾನೂನು ಜಾರಿಗೆ ಅವಕಾಶ ಮಾಡಿಕೊಡದಂತೆ ಚುನಾವಣೆ ಆಯೋಗ, ಸಿಎಂ ಮತ್ತು ಸರ್ಕಾರದ ಮುಖ್ಯಕಾರ್ಯದರ್ಶಿ ಅವರಿಗೆ ಅಹಿಂಸಾ ಸಂಘಟನೆ ಮನವಿ ಸಲ್ಲಿಸಿದೆ. ಕಾನೂನು ಜಾರಿ ಮಾಡಿದರೆ ತಕ್ಷಣ ಹೋರಾಟಕ್ಕಿಳಿಯುವ ಎಚ್ಚರಿಕೆಯನ್ನೂ ನೀಡಿದೆ.
ಅನುಷ್ಠಾನವೂ ಸುಲಭವಲ್ಲ
ಒಂದು ವೇಳೆ ಸರ್ಕಾರ ಹೊಸ ಕಾನೂನು ಜಾರಿ ಮಾಡಿದರೆ 2017ರ ಫೆ.9ರ ನಂತರ ಹೊರಡಿಸಿದ ಹಿಂಬಡ್ತಿ- ಮುಂಬಡ್ತಿ ಆದೇಶವೆಲ್ಲ,  ರದ್ದಾಗುತ್ತದೆ. ಅಲ್ಲದೆ ಹೊಸದಾಗಿ ಎಲ್ಲ ಇಲಾಖೆಯ ಜ್ಯೇಷ್ಠತಾ ಪಟ್ಟಿ ಮಾಡಿ, ಆಕ್ಷೇಪಣೆ ಕರೆದು ಮುಂಬಡ್ತಿ ನೀಡಬೇಕಾಗುತ್ತದೆ. ಈ ಪ್ರಕ್ರಿಯೆ ತಕ್ಷಣಕ್ಕೆ ಮುಗಿಯುವ ಕೆಲಸವೂ ಅಲ್ಲ.

No comments:

Post a Comment

ಅನಿಸಿಕೆ ತಿಳಿಸಿ

ಹೆಚ್ಚು ಓದಿದವು