Monday, September 24, 2018

**RSGE**:::

ಸರ್ಕಾರಿ ಶಾಲೆಗಳ ಶಿಕ್ಷಕರು ವಾರ್ಷಿಕ ಶೈಕ್ಷಣಿಕ ಅವಧಿಯಲ್ಲಿ ಕೇವಲ ಶೇ.19.1 ಸಮಯವನ್ನು ವಿದ್ಯಾರ್ಥಿಗಳ ಕಲಿಕೆಗೆ ಮೀಸಲಿಡುತ್ತಿದ್ದಾರೆ. ಉಳಿದ ಶೇ.81 ಅವಧಿ ಸರ್ಕಾರದ ವಿವಿಧ ಕೆಲಸದಲ್ಲೇ ಕಳೆದುಹೋಗುತ್ತಿದೆ ಎಂಬ ಆತಂಕಕಾರಿ ವಿಷಯವನ್ನು ಶೈಕ್ಷಣಿಕ ಯೋಜನೆ ಹಾಗೂ ಆಡಳಿತದ ರಾಷ್ಟ್ರೀಯ ಸಂಸ್ಥೆ(ಎನ್​ಐಇಪಿಎ)ಸಮೀಕ್ಷಾ ವರದಿ ಹೊರಗೆಡವಿದೆ.
ಪಾಠ ಮಾಡಲೇ ಬಿಡುವುದಿಲ್ಲ!
ಶೈಕ್ಷಣಿಕ ವರ್ಷ ಆರಂಭದಿಂದ ಸೆಪ್ಟೆಂಬರ್​ವರೆಗೆ ಪಠ್ಯಪುಸ್ತಕ, ಸಮವಸ್ತ್ರ, ಸೈಕಲ್ ವಿತರಣೆ ಹಾಗೂ ಇತರ ಸರ್ಕಾರಿ ಕೆಲಸಗಳಲ್ಲಿಯೇ ಶಿಕ್ಷಕರು ಹೈರಾಣಾಗಿ ಹೋಗುತ್ತಾರೆ. ಉಳಿದ ದಿನಗಳಲ್ಲಿಯೂ ಸರ್ಕಾರ ಹೇಳಿದ ಇತರ ಕೆಲಸಗಳನ್ನು ಮಾಡಬೇಕಾಗುತ್ತದೆ. ಸರ್ಕಾರದ ವಿವಿಧ ಕೆಲಸಗಳನ್ನು ಮಾಡುವುದು ಹೇಗೆಂದು ಹೇಳಿಕೊಡುತ್ತಾರೆ. ಆದರೆ ಪಠ್ಯದ ಗುಣಮಟ್ಟ ಏರಿಕೆಗೆ ಯಾವುದೇ ಮಾರ್ಗಸೂಚಿಗಳು ಬರುವುದಿಲ್ಲ. ಇದರಿಂದ ಸರ್ಕಾರಿ ಶಾಲೆಗಳ ಗುಣಮಟ್ಟ ಕುಸಿಯುತ್ತಿದೆ ಎಂಬ ಶಿಕ್ಷಕರ ಅಭಿಪ್ರಾಯವೂ ವರದಿಯಲ್ಲಿ ಉಲ್ಲೇಖವಾಗಿದೆ.
ಏನೇನು ಶಿಕ್ಷಣೇತರ ಕೆಲಸ?
# ಚುನಾವಣೆ ಅಧಿಕಾರಿ, ಮತಚೀಟಿ ನೋಂದಣಿಗೆ ಸಹಕಾರ
# ಬಿಸಿಯೂಟ ಹಾಗೂ ಕ್ಷೀರಭಾಗ್ಯ ಉಸ್ತುವಾರಿ
# ಆದಾಯ ಹಾಗೂ ಜಾತಿ ಪತ್ರದ ನೋಂದಣಿ
# ಶಿಕ್ಷಣ ಇಲಾಖೆಯ ಇತರ ಕೆಲಸಗಳು
# ಜನಗಣತಿ
# ಶಾಲೆಯಲ್ಲಿ ಗುಮಾಸ್ತ ಹಾಗೂ ಪರಿಚಾರಕರು ಮಾಡುವ ಎಲ್ಲ ಕೆಲಸ
# ಬಯಲು ಬಹಿರ್ದೆಸೆ ಮುಕ್ತ ಸಮಾಜ ಸೇರಿ ಇತರ ಸರ್ಕಾರಿ ಯೋಜನೆಗಳ ಕುರಿತು ಸಮೀಕ್ಷೆ
# ಪಲ್ಸ್ ಪೋಲಿಯೊ ಲಸಿಕೆ ಕಾರ್ಯಕ್ರಮ
ನೆಪಮಾತ್ರದ ಅನುಪಾತ
ಶಿಕ್ಷಣ ಹಕ್ಕು ಕಾಯ್ದೆ ಪ್ರಕಾರ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಅನುಪಾತ 30:1 ಇರಬೇಕು. ಆದರೆ ಕರ್ನಾಟಕ ಸೇರಿ ಯಾವುದೇ ರಾಜ್ಯಗಳಲ್ಲಿ ಈ ಅನುಪಾತ ಅನುಷ್ಠಾನಕ್ಕೆ ಬಂದಿಲ್ಲ. ವರದಿಯಲ್ಲಿ ಮಹಾರಾಷ್ಟ್ರದ ಒಂದು ಶಾಲೆಯ ಉದಾಹರಣೆ ನೀಡಲಾಗಿದ್ದು, ಆ ಶಾಲೆಯಲ್ಲಿ 8 ಶಿಕ್ಷಕರಿದ್ದರೆ, ಐವರು ಶಿಕ್ಷಣೇತರ ಚಟುವಟಿಕೆಯಲ್ಲಿ ನಿರತರಾಗಿರುತ್ತಾರೆ. ಉಳಿದ ಮೂವರು ಶಿಕ್ಷಕರು 555 ವಿದ್ಯಾರ್ಥಿಗಳನ್ನು ನಿಭಾಯಿಸಬೇಕಿದೆ. ಶೇ.15 ಶಿಕ್ಷಕರು ಪಾಠ ಮಾಡುವುದು ಬಿಟ್ಟು ಕಾಯಂ ಆಗಿ ಸರ್ಕಾರಿ ಚಾಕರಿಯಲ್ಲಿ ನಿರತರಾಗಿದ್ದಾರೆ.
> ದೇಶದಲ್ಲಿರುವ ಶಾಲೆಗಳು: 14.67 ಲಕ್ಷ
> ಸರ್ಕಾರಿ ಶಾಲೆಗಳು: 10.7 ಲಕ್ಷ
> ಸರ್ಕಾರಿ ಶಾಲೆ ವಿದ್ಯಾರ್ಥಿಗಳು: 11 ಕೋಟಿ
> ಒಟ್ಟು ಶಿಕ್ಷಕರು: 80.7 ಲಕ್ಷ
> ಸರ್ಕಾರಿ ಶಾಲೆ ಶಿಕ್ಷಕರು: 47.3 ಲಕ್ಷ
ಶಿಫಾರಸುಗಳೇನು?
# ಶಿಕ್ಷಣ ಹಕ್ಕು ಕಾಯ್ದೆಯಲ್ಲಿ ಉಲ್ಲೇಖವಾಗಿರುವಂತೆ ಶಿಕ್ಷಣೇತರ ಚಟುವಟಿಕೆಗಳಿಗೆ ಶಿಕ್ಷಕರನ್ನು ಬಳಸಿಕೊಳ್ಳಬಾರದು.
# ಶಿಕ್ಷಣ ಹಾಗೂ ಶಿಕ್ಷಣೇತರ ಚಟುವಟಿಕೆಗಳ ವ್ಯಾಖ್ಯಾನವನ್ನು ಶಿಕ್ಷಣ ಇಲಾಖೆ ಮಾಡಬೇಕು.
# ಶಿಕ್ಷಕರನ್ನು ಆಡಳಿತದ ಕೆಲಸಕ್ಕೆ ಬಳಸಿಕೊಳ್ಳುವುದನ್ನು ನಿರ್ಬಂಧಿಸಬೇಕು.
# ಒಂದು ದೇಶ, ಒಂದು ಚುನಾವಣೆ ವ್ಯವಸ್ಥೆಯಿಂದ ಪದೇಪದೆ ಶಿಕ್ಷಕರ ಮೇಲಿನ ಚುನಾವಣೆ ಕೆಲಸದ ಒತ್ತಡ ತಪ್ಪಲಿದೆ.
ನಿಯಮ ಹೇಳುವುದೇನು?
# ಕಾಯ್ದೆ ಪ್ರಕಾರ ಕಿರಿಯ ಪ್ರಾಥಮಿಕ ಶಾಲೆಗೆ ವಾರ್ಷಿಕ 200 ಕೆಲಸದ ದಿನ
# ಹಿರಿಯ ಪ್ರಾಥಮಿಕ ಶಾಲೆಗೆ 220 ಕೆಲಸದ ದಿನ
# ಆದರೆ ಕೇವಲ 42 ದಿನಗಳು ಕಲಿಕೆಗೆ ಮೀಸಲು

No comments:

Post a Comment

ಅನಿಸಿಕೆ ತಿಳಿಸಿ

ಹೆಚ್ಚು ಓದಿದವು