Wednesday, July 04, 2018

**RSGE**::: ಅಂಧರಾಗಿದ್ದರೆ ಆಸ್ತಿಯಲ್ಲಿ ಭಾಗ ಇಲ್ಲವೇ??

ಎಸ್. ಸುಶೀಲಾ ಚಿಂತಾಮಣಿ
# ತಂದೆ ತಾಯಿಗೆ ನಾವು ಮೂವರು ಮಕ್ಕಳು. ನಮ್ಮ ತಂದೆಗೆ ತಾತನಿಂದ ಬಂದಿದ್ದ ಆಸ್ತಿಯನ್ನು ಮೂರೂ ಮಕ್ಕಳಿಗೆ ವಿಭಾಗ ಮಾಡಿಕೊಟ್ಟಿದ್ದಾರೆ. ಆದರೆ, ನಮ್ಮ ತಂದೆ ತಾಯಿಗೆ ಅವರ ಸೊಸೆಯರ ಮತ್ತು ಮೊಮ್ಮಕ್ಕಳ ವರ್ತನೆಯಿಂದ ಬೇಸರವಾಗಿದೆ. ನಮ್ಮ ತಂದೆ ತಾಯಿಯ ಕಾಲಾನಂತರ ಈ ಆಸ್ತಿಗಳಲ್ಲಿ ಸೊಸೆಯರಿಗೆ ಮತ್ತು ಮಕ್ಕಳಿಗೆ ಭಾಗ ಹೋದರೆ ಹೇಗೆ ಎನ್ನುವ ಯೋಚನೆಯಿದೆ. ಸೊಸೆಯರಿಗೆ ಮತ್ತು ಮಕ್ಕಳಿಗೆ ಈ ಆಸ್ತಿಗಳಲ್ಲಿ ಭಾಗ ಹೋಗಲೇಬಾರದು ಎಂದು ಬರೆಸಬಹುದೇ? ಇದರಿಂದ ಏನಾದರೂ ತೊಂದರೆ ಆಗುತ್ತದೆಯೇ?
ಹೆಸರು ಊರು ಬೇಡ
ನೀವು ವೃಥಾ ಯೋಚನೆ ಮಾಡುತ್ತಿದ್ದೀರಿ. ನಿಮ್ಮ ತಂದೆಗೆ ಅವರ ತಂದೆಯಿಂದ ಬಂದ ಆಸ್ತಿ ಪ್ರತ್ಯೇಕ ಆಸ್ತಿ ಆಗುತ್ತದೆ. ಅದನ್ನು ಅವರು ತಮ್ಮ ಇಚ್ಛೆ ಬಂದಂತೆ ವಿಲೇವಾರಿ ಮಾಡಬಹುದು. ಅವರು ಈಗಾಗಲೇ ಈ ಆಸ್ತಿಯನ್ನು ಮೂರು ಮಕ್ಕಳಿಗೂ ಹಂಚಿ ವಿಭಾಗ ಮಾಡಿದ್ದಾರೆ. ಈಗ ಅದು ನಿಮ್ಮಗಳ ಪ್ರತ್ಯೇಕ ಆಸ್ತಿ ಆಗುತ್ತದೆ. ನೀವು ಆ ಆಸ್ತಿಗಳನ್ನು ನಿಮ್ಮ ತಂದೆಯ ಜೀವಿತ ಕಾಲದಲ್ಲಿಯೇ ಏನು ಬೇಕಾದರೂ ಮಾಡಬಹುದು. ನೀವು ನಿಮ್ಮ ಜೀವಿತ ಕಾಲದಲ್ಲಿ ಈ ಆಸ್ತಿಗಳನ್ನು ಪರಭಾರೆ ಮಾಡದೆ ತೀರಿಕೊಂಡರೆ ಮಾತ್ರ ಆ ಆಸ್ತಿ ನಿಮ್ಮ ಹೆಂಡತಿ ಮತ್ತು ಮಕ್ಕಳಿಗೆ ಸಮವಾಗಿ ಭಾಗ ಆಗುತ್ತದೆ. ನಿಮ್ಮ ತಂದೆ ಬದುಕಿರುವವರೆಗೆ ಅವರಿಂದ ನಿಮಗೆ ಬಂದ ಆಸ್ತಿಯಲ್ಲಿ ನಿಮ್ಮ ನಿಮ್ಮ ಹೆಂಡತಿಯರಿಗೆ ಮತ್ತು ನಿಮ್ಮ ಮಕ್ಕಳಿಗೆ ಹಕ್ಕು ಇರುವುದಿಲ್ಲ. ಆದರೆ ನಿಮ್ಮ ತಂದೆ ತೀರಿಕೊಂಡ ಬಳಿಕ ಮಕ್ಕಳಿಗೆ ನಾಲ್ಕನೇ ತಲೆಯಿಂದ ಬಂದ (ತಂದೆಯ ಅಜ್ಜನಿಂದ ಬಂದ) ಆಸ್ತಿಯಾಗುವುದರಿಂದ ಅದರಲ್ಲಿ ಹಕ್ಕು ಬರುತ್ತದೆ. ನಿಮ್ಮ ತಂದೆ ತಾಯಿಯ ಕಾಲಾನಂತರ, ಸೊಸೆಯರಿಗೆ ಮತ್ತು ಮಕ್ಕಳಿಗೆ ಈ ಆಸ್ತಿಗಳಲ್ಲಿ ಭಾಗ ಹೋಗಲೇಬಾರದು ಎಂದು ಅವರಿಂದ ಬರೆಸಲು ಆಗುವುದಿಲ್ಲ. ನೀವು ನಿಮ್ಮ ತಂದೆಯ ಆಸೆ ತೀರಿಸಬೇಕೆಂದರೆ ಈಗಲೇ ಆಸ್ತಿ ಮಾರಿ ಹಣವನ್ನು ಬ್ಯಾಂಕಿನಲ್ಲಿ ಹಾಕಿ ಇಟ್ಟುಕೊಳ್ಳಬಹುದು ಅಷ್ಟೆ.
# ನಮ್ಮ ತಂದೆಗೆ ನಾವು ಮೂವರು ಮಕ್ಕಳು. ನನಗೆ ಒಬ್ಬ ಅಕ್ಕ, ಒಬ್ಬ ತಮ್ಮ. ನನಗೆ ಕಣ್ಣು ಕಾಣಿಸುವುದಿಲ್ಲ. ಕೆಲಸದಲ್ಲಿ ಇದ್ದೇನೆ. ನಮ್ಮ ತಂದೆ ತಾಯಿ ಇಬ್ಬರೂ ಇಲ್ಲ. ನಮ್ಮ ತಂದೆ ಎರಡು ಮಹಡಿ ಇರುವ ಒಂದು ದೊಡ್ಡ ಮನೆ ಕಟ್ಟಿದ್ದರು. ಒಂದು ಸೈಟೂ ಇದೆ. ಆ ಮನೆ ಕಟ್ಟಲು ನಾನು ಮತ್ತು ಅಕ್ಕ ಹಣ ಕೊಟ್ಟಿದ್ದೆವು. ಆಮೇಲೆ ಮನೆ ಗಟ್ಟಿ ಮಾಡಲು ತಮ್ಮನಿಗೂ ಹಣ ಕೊಟ್ಟೆವು. ಈಗ ತಮ್ಮ ನನ್ನನ್ನು ಕಡೆಗಣಿಸುತ್ತಿದ್ದಾನೆ. ಅವನ ಹೆಂಡತಿಯ ಜತೆ ಸೇರಿ ಮನೆ ಬಿಟ್ಟು ಹೋಗು ಎನ್ನುತ್ತಿದ್ದಾನೆ. ನಾನು ಅಂಧಳಾಗಿರುವುದರಿಂದ ನನಗೆ ಕೋರ್ಟಿಗೆ ಹೋದರೂ ಭಾಗ ಬರುವುದಿಲ್ಲ ಎನ್ನುತ್ತಿದ್ದಾನೆ. ನಾನು ಮನೆಗೆ ಕೊಟ್ಟಿರುವ ದುಡ್ಡೂ ಕೊಡುವುದಿಲ್ಲ ಎನ್ನುತ್ತಿದ್ದಾನೆ. ನಾನೀಗ ಏನು ಮಾಡಬೇಕು? ದಯಮಾಡಿ ತಿಳಿಸಿ, ಸಹಾಯ ಮಾಡಿ.
-ರೂಪಾ ಊರು ಬೇಡ
ನೀವು ಹೆದರಬೇಕಾಗಿಲ್ಲ. ನಿಮ್ಮ ತಂದೆಯ ಆಸ್ತಿಯಲ್ಲಿ ನಿಮಗೆ, ನಿಮ್ಮ ಅಕ್ಕನಿಗೆ ಮತ್ತು ನಿಮ್ಮ ತಮ್ಮನಿಗೆ ಮೂವರಿಗೂ ಮೂರನೇ ಒಂದು ಭಾಗ ಸಮಪಾಲು ಇರುತ್ತದೆ. ನಿಮಗೆ ನಿಮ್ಮ ಭಾಗ ಬೇಕೆಂದು ಕೂಡಲೇ ನ್ಯಾಯಾಲಯದಲ್ಲಿ ವಿಭಾಗದ ಕೇಸು ಹಾಕಿ. ಮನೆಯಿಂದ ನಿಮ್ಮನ್ನು ತಮ್ಮ ಹೊರಹಾಕದಂತೆ ತಡೆ ಆಜ್ಞೆಯನ್ನೂ ನೀವು ಪಡೆಯಬಹುದು. ದೈಹಿಕ ನ್ಯೂನ್ಯತೆಯಿಂದ ಆಸ್ತಿಯಲ್ಲಿ ಭಾಗದ ಹಕ್ಕು ಹೋಗುವುದಿಲ್ಲ. ಕುರುಡರಿಗೂ ಆಸ್ತಿಯಲ್ಲಿ ಹಕ್ಕು ಇದ್ದೇ ಇರುತ್ತದೆ. ಇನ್ನು ಮನೆ ಕಟ್ಟಲು ತಂದೆಗೆ ಮತ್ತು ತಮ್ಮನಿಗೆ ನೀವು ಕೊಟ್ಟ ಹಣ ನಿಮಗೆ ಬರುವುದಿಲ್ಲ. ಅದನ್ನು ನೀವು ಅವರಿಗೆ ಸಾಲರೂಪವಾಗಿ ಕೊಟ್ಟಿದ್ದರೆ, ಸಾಲ ಕೊಟ್ಟ ಮೂರು ವರ್ಷಗಳ ಒಳಗೆ ಅದನ್ನು ವಾಪಸ್ ಪಡೆಯಲು ಕೇಸು ಹಾಕಬಹುದಿತ್ತು. ಹಾಗೆಯೇ ವಿಶ್ವಾಸದಿಂದ ಕೊಟ್ಟಿದ್ದರೆ ಏನೂ ಮಾಡಲಾಗುವುದಿಲ್ಲ.
(ಪ್ರತಿಕ್ರಿಯಿಸಿ: susheelasarathi@yahoo.co.in)
(ಲೇಖಕರು ಹೈಕೋರ್ಟ್ ವಕೀಲರು, ಹಿರಿಯ ಮಧ್ಯಸ್ಥಿಕೆಗಾರರು)
(ಸೂಚನೆ: ದಯವಿಟ್ಟು ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕಳಿಸಬೇಡಿ.)
ಪ್ರತಿ ಮಂಗಳವಾರ ಪ್ರಕಟವಾಗುವ ಈ ಅಂಕಣದಲ್ಲಿ, ಮಹಿಳೆಯರು ಕುಟುಂಬ, ದಾಂಪತ್ಯ ಇತ್ಯಾದಿಗಳಿಗೆ ಸಂಬಂಧಿಸಿದ ಕಾನೂನಾತ್ಮಕ ವಿಷಯಗಳ ಕುರಿತಾದ ಪ್ರಶ್ನೆಗಳನ್ನು ಕೇಳಬಹುದು.
ನಮ್ಮ ವಿಳಾಸ:
ಸಂಪಾದಕರು, ವಿಜಯವಾಣಿ, ನ್ಯಾಯದೇವತೆ ವಿಭಾಗ,
ನಂ. 24, ಸಾಯಿರಾಂ ಟವರ್ಸ್, ಮೊದಲನೇ ಮಹಡಿ, 5ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು – 560 018.

No comments:

Post a Comment

ಅನಿಸಿಕೆ ತಿಳಿಸಿ

ಹೆಚ್ಚು ಓದಿದವು