ಬೆಂಗಳೂರು :
ರಾಷ್ಟ್ರೀಯ ಪಿಂಚಣಿ ಯೋಜನೆಯಡಿ
(ಎನ್‌ಪಿಎಸ್) ಬರುವ
ರಾಜ್ಯ ಸರ್ಕಾರಿ ನೌಕರರು ಇನ್ನು
ಮುಂದೆ ತಮ್ಮ ಮಕ್ಕಳ
ಉನ್ನತ ಶಿಕ್ಷಣ, ಮದುವೆ, ಮನೆ
ನಿರ್ಮಾಣ ಸೇರಿದಂತೆ
ಗಂಭೀರ ಕಾಯಿಲೆ, ಅಪಘಾತದಂತಹ
ಸಮಸ್ಯೆಗೊಳಗಾದ
ವೇಳೆ ತಾವು ಪಾವತಿಸಿದ ಪಿಂಚಣಿ
ಮೊತ್ತದ ಶೇ.25ರಷ್ಟು ಹಣವನ್ನು ಮುಂಗಡವಾಗಿ
ಪಡೆದುಕೊಳ್ಳುವ
ಅವಕಾಶವನ್ನು ಕಲ್ಪಿಸಿ ರಾಜ್ಯ ಸರ್ಕಾರ
ಆದೇಶ ಹೊರಡಿಸಿದೆ.
ಎನ್‌ಪಿಎಸ್‌ನಿಂದ
ಸರ್ಕಾರಿ ನೌಕರರಿಗೆ ಯಾವುದೇ
ಉಪಯೋಗ ಆಗುತ್ತಿಲ್ಲ,
ಇದನ್ನು ರದ್ದುಪಡಿಸಿ ಹಳೆಯ
ಪಿಂಚಣಿ ಯೋಜನೆ
ಜಾರಿಗೆ ತರಬೇಕೆಂದು ಆಗ್ರಹಿಸಿ
ಹೋರಾಟ
ನಡೆಸುತ್ತಿದ್ದ ಸರ್ಕಾರಿ ನೌಕರರಿಗೆ ಕೊಂಚ ಫಲ
ಸಿಕ್ಕಂತಾಗಿದೆ.
ಪಿಂಚಣಿ ಯೋಜನೆಗೆ
ಭದ್ರತೆ ಒದಗಿಸುವ ಪಿಂಚಣಿ ನಿಧಿ
ನಿಯಂತ್ರಣ ಮತ್ತು
ಅಭಿವೃದ್ಧಿ ಪ್ರಾಧಿಕಾರ (ಪಿಎಫ್‌ಆರ್‌ಡಿಎ)
2015ರ ಜನವರಿಯಲ್ಲಿ
ಹೊರಡಿಸಿರುವ ಅಧಿಸೂಚನೆಯಲ್ಲಿ
ಹೊಸ ಪಿಂಚಣಿ
ಯೋಜನೆಯಾದ ಎನ್‌ಪಿಎಸ್‌ನಡಿ ಬರುವ
ಸರ್ಕಾರಿ ನೌಕರರಿಗೆ
ಕೆಲ ವಿಶೇಷ ಸಂದರ್ಭ ಹಾಗೂ
ಸಮಸ್ಯೆಗಳು
ಎದುರಾದಾಗ ತಮ್ಮ ವೇತನದಲ್ಲಿ
ಕಡಿತವಾಗಿರುವ
ಪಿಂಚಣಿ ಮೊತ್ತದ ಶೇ.25ರಷ್ಟು ಹಣವನ್ನು
ಮುಂಗಡವಾಗಿ
ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ.
ಇದರ ಆಧಾರದ ಮೇಲೆ
ಸರ್ಕಾರದ ಖಜಾನೆ ನಿರ್ದೇಶಕರು
ಸಲ್ಲಿಸಿರುವ
ಪ್ರಸ್ತಾವನೆಯನ್ನು ಒಪ್ಪಿ ರಾಜ್ಯ ಸರ್ಕಾರ
ಮಂಗಳವಾರ ಹೊಸ
ಪಿಂಚಣಿ ಯೋಜನೆಯಡಿ ಬರುವ
ಸರ್ಕಾರಿ ನೌಕರರು
ತಮ್ಮ ಇಡಿಗಂಟು ಪಿಂಚಣಿಯಲ್ಲಿ
ಶೇ.25ರಷ್ಟು ಹಣವನ್ನು ಮುಂಗಡ ಪಡೆಯಲು ಅವಕಾಶ
ಕಲ್ಪಿಸಿ ಹಣಕಾಸು
ಇಲಾಖೆ (ಪಿಂಚಣಿ) ಜಂಟಿ ಕಾರ್ಯದರ್ಶಿ
ವೈ.ಕೆ. ಪ್ರಕಾಶ್
ಆದೇಶ ಹೊರಡಿಸಿದ್ದಾರೆ.
ಸೌಲಭ್ಯ ಯಾವಾಗ
ಸಿಗುತ್ತೆ?: ಸರ್ಕಾರಿ ನೌಕರರು
ತಮ್ಮ
ಮಕ್ಕಳ ಉನ್ನತ
ಶಿಕ್ಷಣ, ಮದುವೆ ಕಾರ್ಯಗಳು,
ಸ್ವಂತ ಮನೆ
ಕಟ್ಟಲು, ಕೊಳ್ಳಲು ಅಥವಾ ಪ್ಲಾಟ್ (ಸೈಟ್) ಖರೀದಿಸಲು
ಶೇ.25ರಷ್ಟು ಪಿಂಚಣಿ ಹಣ ಪಡೆಯಬಹುದಾಗಿದೆ. ಒಂದು
ವೇಳೆ ಈಗಾಗಲೇ
ನೌಕರನ ಹೆಸರಲ್ಲಿ ಮನೆ, ಪ್ಲಾಟ್
ಹೊಂದಿದ್ದರೆ
(ಪಿತ್ರಾರ್ಜಿತವಾಗಿ ಬಂದ ನಿವಾಸ
ಹೊರತುಪಡಿಸಿ) ಈ
ಸೌಲಭ್ಯ ಸಿಗುವುದಿಲ್ಲ ಎಂದು
ಆದೇಶದಲ್ಲಿ
ತಿಳಿಸಲಾಗಿದೆ.
ಸರ್ಕಾರಿ ನೌಕರ
ತಾನು ಅಥವಾ ತನ್ನ ಕುಟುಂಬ ಸದಸ್ಯರಲ್ಲಿ
(ಪತ್ನಿ, ಮಕ್ಕಳು, ಪೋಷಕರು) ಯಾರಾದರೂ ಕ್ಯಾನ್ಸರ್, ಕಿಡ್ನಿ
ವೈಫಲ್ಯ, ಹೃದಯ ಶಸ್ತ್ರ ಚಿಕಿತ್ಸೆ, ಪಾಶ್ರವಾಯು, ಪ್ರಜ್ಞಾಹೀನ
ಸ್ಥಿತಿ, ಅಂಗಾಗ ಕಸಿ, ಶಾಶ್ವತ ದೃಷ್ಟಿದೋಷದಂತಹ ಗಂಭೀರ
ಕಾಯಿಲೆ ಆರೋಗ್ಯ
ಸಮಸ್ಯೆ ಅಪಘಾತದಲ್ಲಿ ಗಂಭೀರ
ಗಾಯಗೊಂಡ
ಸಂದರ್ಭದಲ್ಲಿ ಶೇ.25ರಷ್ಟುಪಿಂಚಣಿ
ಹಣವನ್ನು ಅರ್ಜಿ
ಸಲ್ಲಿಸಿ ಪಡೆದುಕೊಳ್ಳಬಹುದು.
ಅಷ್ಟೇ ಅಲ್ಲ,
ನೌಕರರು ತಮ್ಮ ವೃತ್ತಿಗೆ
ಸಂಬಂಧಿಸಿದ
ಕ್ಷೇತ್ರದಲ್ಲಿ
ಕೌಶಲ್ಯಾಧಾರಿತ ಕೋರ್ಸು, ಪದವಿ, ಡಿಪ್ಲೊಮಾ,
ಸರ್ಟಿಫಿಕೇಟ್
ಕೋರ್ಸುಗಳಿಗೆ ಪ್ರವೇಶ ಪಡೆಯಲು ಕೂಡ
ಈ ಹಣ
ಪಡೆದುಕೊಳ್ಳಬಹುದು ಎಂದು ಆದೇಶದಲ್ಲಿ
ತಿಳಿಸಲಾಗಿದೆ.
ರೆಗ್ಯೂಲರ್ ಅಥವಾ ದೂರ ಶಿಕ್ಷಣ ಎರಡೂ
ರೀತಿಯಲ್ಲೂ
ಅಧ್ಯಯನಕ್ಕೆ ಅವಕಾಶವಿದ್ದು, ಕೋರ್ಸುಗಳು
ಕನಿಷ್ಠ ಮೂರರಿಂದ
ಅದಕ್ಕೂ ಹೆಚ್ಚು ತಿಂಗಳ
ಅಧ್ಯಯನದಿಂದ
ಕೂಡಿರಬೇಕು. ಮಾನ್ಯತೆ ಪಡೆದ
ವಿಶ್ವವಿದ್ಯಾಲಯ,
ಕಾಲೇಜು, ಯುಜಿಸಿಯಂತಹ ಅಧಿಕೃತ
ಸಂಸ್ಥೆಗಳಿಂದ
ಅಂಗೀಕೃತವಾಗಿರಬೇಕು. ಅಧ್ಯಯನಕ್ಕೆ ತಮ್ಮ
ಇಲಾಖೆಯಿಂದ
ನಿರಾಕ್ಷೇಪಣಾ ಪತ್ರ ಪಡೆಯುವುದು
ಕಡ್ಡಾಯ.
ನಿಯಮಗಳೇನು?
ರಾಷ್ಟ್ರೀಯ ಪಿಂಚಣಿ
ಯೋಜನೆ (ಎನ್‌ಪಿಎಸ್) 2006
ಏಪ್ರಿಲ್ 1ರಿಂದ ಸರ್ಕಾರಿ ಹುದ್ದೆಗಳಿಗೆ ನೇಮಕವಾಗಿ ಸೇವೆ
ಸಲ್ಲಿಸುತ್ತಿರುವವರಿಗೆ
ಹಾಗೂ 2004ರ ಜನವರಿ 1ರಿಂದ
ಅಖಿಲ ಭಾರತ ಸೇವಾ
ಹುದ್ದೆಗಳಿಗೆ ನೇಮಕವಾಗಿ ಸೇವೆ
ಸಲ್ಲಿಸುತ್ತಿರುವ
ಕರ್ನಾಟಕ ಕೇಡರ್‌ನ ಅಧಿಕಾರಿಗಳು ಈ
ಸೌಲಭ್ಯ
ಪಡೆಯಬಹುದು. ಪಿಂಚಣಿ ಮುಂಗಡ ಸೌಲಭ್ಯಕ್ಕೆ
ನೌಕರರು ಕನಿಷ್ಠ
ಮೂರು ವರ್ಷ ಸೇವೆ ಪೂರೈಸಿರಬೇಕು.
ನೌಕರರು ವೃತ್ತಿಗೆ
ಸೇರಿದ ದಿನದಿಂದ ಮುಂಗಡ ಪಿಂಚಣಿ
ಪಡೆಯಲು ಅರ್ಜಿ
ಸಲ್ಲಿಸಿದ ದಿನದವರೆಗೆ ಪಾವತಿಸಿರುವ
ಪಿಂಚಣಿ
ಮೊತ್ತದಲ್ಲಿ ಶೇ.25ರಷ್ಟನ್ನು ಮಾತ್ರ
ಪಡೆಯಬಹುದಾಗಿದೆ.
ನೌಕರ ತನ್ನ ವೃತ್ತಿ ಅವಧಿಯಲ್ಲಿ
ಮೂರು ಬಾರಿ ಮಾತ್ರ
ಈ ರೀತಿ ಮುಂಗಡ ಪಿಂಚಣಿ
ಪಡೆಯಬಹುದು. ಒಂದು
ವೇಳೆ ಸರ್ಕಾರಿ ನೌಕರ ಗಂಭೀರ
ಕಾಯಿಲೆಯಿಂದ
ಆಸ್ಪತ್ರೆಯಲ್ಲಿದ್ದರೆ ಆತನ ಪತ್ನಿ ಅಥವಾ
ಕುಟುಂಬದ ಇತರೆ
ಸದಸ್ಯರು ಅರ್ಜಿ ಸಲ್ಲಿಸಲು
ಅವಕಾಶವಿದೆ.
ಈವರೆಗಿನ ಪಿಂಚಣಿ
ಯೋಜನೆ ಏನಿತ್ತು?
ಎನ್‌ಪಿಎಸ್
ಯೋಜನೆಯಲ್ಲಿ ಸರ್ಕಾರಿ ನೌಕರರ ವೇತನದಲ್ಲಿ
ಪ್ರತಿ ತಿಂಗಳು
ನಿಗದಿತ ಮೊತ್ತದ ಹಣ ನೌಕರನ ಪಿಂಚಣಿ
ಖಾತೆಗೆ
ಜಮೆಯಾಗುತ್ತಿತ್ತು. ಅಷ್ಟೇ ಮೊತ್ತದ ಹಣವನ್ನು
ಸರ್ಕಾರ
ಪಾವತಿಸುತ್ತಿತ್ತು. ಈ ಹಣವನ್ನು ಸೇವಾ ಅವಧಿಯ
ಮಧ್ಯದಲ್ಲಿ ಒಂದು
ರುಪಾಯಿ ಸಹ ಮುಂಗಡವಾಗಿ
ಪಡೆಯಲು ಅವಕಾಶ
ಇರಲಿಲ್ಲ. ಬದಲಿಗೆ ನೌಕರ ನಿವೃತ್ತಿ
ಹೊಂದಿದಾಗ,
ಸ್ವಯಂ ನಿವೃತ್ತಿ ಅಥವಾ
ರಾಜೀನಾಮೆ
ನೀಡಿದಾಗ ಅಥವಾ
ಸೇವಾ ಅವಧಿಯಲ್ಲೇ ಮೃತಪಟ್ಟರೆ
ಆತನ ಕುಟುಂಬದವರು
ಇಡಿಗಂಟು ರೂಪದಲ್ಲಿ ಒಟ್ಟು
ಹಣವನ್ನು
ಪಡೆದುಕೊಳ್ಳಬಹುದಿತ್ತು. ಈಗ ಸೇವಾ
ಅವಧಿಯಲ್ಲೇ ಶೇ.25ರಷ್ಟು ಪಿಂಚಣಿಯನ್ನು ಮುಂಗಡವಾಗಿ
ಪಡೆಯಲು ಅವಕಾಶ
ದೊರೆತಿದೆ.
No comments:
Post a Comment
ಅನಿಸಿಕೆ ತಿಳಿಸಿ